ಪುತ್ತೂರು ತಾಲೂಕು ಕಚೇರಿಗೆ ರೇಡ್..ಪ್ರತೀ ಕಚೇರಿಗೆ ತೆರಳಿ ಹಾಜರಾತಿ ಪರಿಶೀಲಿಸಿದ ಶಾಸಕ ಅಶೋಕ್ ರೈ
ಪುತ್ತೂರು: ತಾಲೂಕು ಕಚೇರಿಯ ಸಿಬಂದಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಕೆಲವೊಂದು ಕಚೇರಿಗೆ ಹಗಲು ವೇಳೆ ಬಾಗಿಲು ಹಾಕಿರುತ್ತಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಅಶೋಕ್ ರೈ ಅವರು ತಾಲೂಕು ಕಚೇರಿಗೆ ದಾಳಿ ನಡೆಸಿ ಹಾಜರಾತಿ ಪರಿಶೀಲನೆ ನಡೆಸಿದ್ದಾರೆ.

ಮಿನಿ ವಿಧಾನ ಸೌಧದಲ್ಲಿರುವ ಪ್ರತೀ ಕಚೇರಿಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಡಿಎಲ್ ಆರ್ ಕಚೇರಿಯಲ್ಲಿ ಯಾರೂ ಇರಲಿಲ್ಲ. ಅಧಿಕಾರಿಯ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅಧಿಕಾರಿ ಇಲ್ಲದಿದ್ದರೆ ಕಚೇರಿಯನ್ನು ಯಾಕೆ ಓಪನ್ ಇಟ್ಟಿದ್ದೀರಿ ಬಂದ್ ಮಾಡಿ ಎಂದು ಶಾಸಕರೇ ಕಚೇರಿಯ ಬಾಗಿಲನ್ನುಮುಚ್ಚಿದರು. ಈ ವೇಳೆ ಓಡೋಡಿ ಬಂದ ಎಡಿಎಲ್ಆರ್ ರವರು ನನಗೆ ಕಡಬ ಹೋಗಲಿದ್ದ ಕಾರಣ ಕಚೇರಿಯಲ್ಲಿ ನಾನಿರಲಿಲ್ಲ ಎಂದು ಶಾಸಕರಲ್ಲಿ ತಿಳಿಸಿದರು.
ಉಳಿದಂತೆ ಎಲ್ಲಾ ಕಚೇರಿಗಳಲ್ಲೂ ಸಿಬಂದಿಗಳು, ಅಧಿಕಾರಿಗಳು ಹಾಜರಿದ್ದರು.
10 ಗಂಟೆಗೇ ಕಚೇರಿಯಲ್ಲಿರಬೇಕು: ಶಾಸಕರ ಸೂಚನೆ
ಎಲ್ಲಾ ಅಧಿಕಾರಿಗಳು,ಸಿಬಂದಿಗಳು, ಬೆಳಿಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು. ಕಚೇರಿಗೆ ತಡವಾಗಿ ಬರುವುದನ್ನು ನಾನು ಸಹಿಸುವುದಿಲ್ಲ.ಜನರ ಕೆಲಸ ಮಾಡಬೇಕು. ಜನ ಕಚೇರಿಗೆ ಬರುವಾಗ ಅಧಿಕಾರಿ,ಸಿಬಂದಿಗಳು ಇರಬೇಕು , ದೂರುಗಳು ಬಾರದ ಹಾಗೇ ಅವರೇ ನೋಡಿಕೊಳ್ಳಬೇಕು. ಇವತ್ತು ಕಚೇರಿಯಲ್ಲಿ ಇಲ್ಲದ ಇಬ್ಬರಿಗೆ ಶೋಕಾಸ್ ನೋಟೀಸ್ ಜಾರಿ ಮಾಡುವಂತೆ ಸೂಚನೆ ನೀಡಿದ್ದೇನೆ, ಸಹಾಯಕ ಕಮಿಷನರ್ ಗೂ ಈ ವಿಚಾರದಲ್ಲಿ ಸೂಚನೆ ನೀಡಿದ್ದೇನೆ, ತಹಶಿಲ್ದಾರ್ ಗೂ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.