ಫರಂಗಿಪೇಟೆ: ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯ
ಬಂಟ್ವಾಳ: ಫೆಬ್ರವರಿ 25ರಂದು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಅಮೆಮ್ಮಾರ್ ನಿವಾಸಿ ದಿಗಂತ್ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

ಸತತ ಕಾರ್ಯಾಚರಣೆ ಬಳಿಕ ಮಾ.8ರಂದು ಬಾಲಕ ದಿಗಂತ್ ಪತ್ತೆಯಾಗಿದ್ದು, ನಾಪತ್ತೆಯಾಗಲು ಕಾರಣವನ್ನೂ ಬಹಿರಂಗಪಡಿಸಿದ್ದಾನೆ.
ಮನೆಯಿಂದ ಹೋಗುವಾಗ ದಿಗಂತ್ 500 ರೂ ತೆಗೆದುಕೊಂಡು ಹೋಗಿದ್ದಾನೆ. ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೆ ಪ್ರಯಾಣ ಮಾಡಿದ್ದಾನೆ.
ಅವನ ಪಾದದಲ್ಲಿ ಗಾಯವಾಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಸ್ವತಹ ದಿಗಂತ್ ಹೇಳಿದ್ದಾನೆ. ಅವನನ್ನು ಯಾರೂ ಎತ್ತಿಕೊಂಡು ಹೋಗಿರಲಿಲ್ಲ. ಅವನೇ ಹೋಗಿದ್ದ. ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ಕಲಿಯುವುದರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಮಂಕಾಗಿದ್ದ, ಪರೀಕ್ಷೆಗೆ ಹೆದರಿದ್ದ ಎನ್ನಲಾಗಿದೆ.
ಸದ್ಯ ಹೈಕೋರ್ಟ್ ಹೇಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಬುಧವಾರ ಹೈಕೋರ್ಟ್ ಹಾಜರುಪಡಿಸಿ ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಯತೀಶ್ ಎನ್ ಮಾಹಿತಿ ನೀಡಿದ್ದಾರೆ.
ದಿಗಂತ್ ನನ್ನು ಪೊಲೀಸರು ಪತ್ತೆ ಮಾಡುತ್ತಿಲ್ಲ ಎಂದು ದೊಡ್ಡ ಮಟ್ಟದ ಪ್ರತಿಭಟನೆಯೂ ನಡೆದಿತ್ತು. ಬಳಿಕ ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಬಾಲಕನನ್ನು ಪತ್ತೆ ಹಚ್ಚುವಂತೆ ಕೋರ್ಟ್ ಆದೇಶ ನೀಡಿತ್ತು.ಇದೀಗ ಪೊಲೀಸರು ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.