ಮಗ್ಗಿ ಹೇಳುವಾಗ ತಪ್ಪಿದಕ್ಕೆ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ
ಪುತ್ತೂರು: ಮಗ್ಗಿ ಹೇಳುವಾಗ ತಪ್ಪಿದಕ್ಕೆ ವಿದ್ಯಾರ್ಥಿಗೆ ಶಿಕ್ಷಕರೋರ್ವರು ಹೊಡೆದಿರುವ ಆರೋಪ ಕೇಳಿಬಂದಿದ್ದು, ಹೊಡೆತದಿಂದ ವಿದ್ಯಾರ್ಥಿಯ ಎಡ ಕೈ ಮೂಳೆಗೆ ಗಾಯವಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪಾಪೆಮಜಲು ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗಾಯಗೊಂಡವರು. ಶಾಲೆಯಲ್ಲಿ ಗಣಿತ ಶಿಕ್ಷಕರ ಮುಂದೆ ವಿದ್ಯಾರ್ಥಿ ಮಗ್ಗಿ ಹೇಳುವಾಗ ತಪ್ಪಿದಕ್ಕೆ ಅವರು ಬೆತ್ತದಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ವಿದ್ಯಾರ್ಥಿ ಮನೆಯಲ್ಲಿ ತಾಯಿ ಮತ್ತು ಅಜ್ಜ ಅವರಲ್ಲಿ ಈ ವಿಚಾರ ತಿಳಿಸಿ ಕೈ ನೋವು ಆಗುತ್ತಿರುವುದಾಗಿ ಹೇಳಿದ್ದರು. ಬಳಿಕ ಅಜ್ಜ ಅವರು ಮೊಮ್ಮಗನನ್ನು ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಕೈ ಊನಗೊಂಡಿದೆ ಎಂದು ತಿಳಿದು ಬಂದಿದೆ.