ರಾಜಕೀಯರಾಜ್ಯ

ಶಿಗ್ಗಾಂವಿ: ಕಾಂಗ್ರೆಸ್ ಗೆಲುವು ಸಾಧಿಸಿದ ಬೆನ್ನಲ್ಲೇ ಅಜ್ಜಂಪೀರ್ ಖಾದ್ರಿಗೆ ಭರ್ಜರಿ ಗಿಫ್ಟ್

ಬೆಂಗಳೂರು: ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಆ ನಂತರ ಸಿಎಂ ಸಿದ್ದರಾಮಯ್ಯ ಅವರ ಮನವಿ ಮೇರೆಗೆ ನಾಮಪತ್ರ ವಾಪಸ್ ಪಡೆದುಕೊಂಡಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ  ಗಿಫ್ಟ್ ಸಿಕ್ಕಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ಅಜ್ಜಂಪೀರ್ ಖಾದ್ರಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಶಿಗ್ಗಾಂವಿ ಉಪಚುನಾವಣೆ ವೇಳೆ ಸಿಎಂ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದ ಖಾದ್ರಿಗೆ ಸಿಎಂ ಸಿದ್ದರಾಮಯ್ಯ ಎರಡೇ ದಿನದಲ್ಲಿ ಈ ಹುದ್ದೆ ನೀಡಿದ್ದಾರೆ.

ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆ ಟಿಕೆಟ್‌ ಗಾಗಿ ಖಾದ್ರಿ ಸಾಕಷ್ಟು ಕಸರತ್ತು ನಡೆಸಿದ್ದರು. ಕೊನೆ ಕ್ಷಣದಲ್ಲಿ ಹೈಕಮಾಂಡ್ ಯಾಸೀರ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಿತ್ತು, ಇದರಿಂದ ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದ ಖಾದ್ರಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ಸಚಿವ ಜಮೀರ್ ಅಹಮ್ಮದ್ ಖಾನ್ ಮನವೊಲಿಸಿದರು ಕೂಡಾ ಪ್ರಯೋಜನವಾಗಿರಲಿಲ್ಲ.

ಅಜ್ಜಂಪೀರ್ ಖಾದ್ರಿ ಅವರನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಕರೆದು ಮಾತುಕತೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿ ಮನವೊಲಿಸಿದ್ದರು. ಬಳಿಕ ಸಿದ್ದರಾಮಯ್ಯ ಮಾತಿಗೆ ಬೆಲೆ ಕೊಟ್ಟು ಖಾದ್ರಿ ಅವರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಯಾಸೀರ್ ಖಾನ್ ಪಠಾಣ್ ಅವರ ಪರವಾಗಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದೀಗ ಖಾದ್ರಿ ಅವರಿಗೆ ಸಿದ್ದರಾಮಯ್ಯ ಕೊಟ್ಟ ಭರವಸೆಯನ್ನು ಫಲಿತಾಂಶ ಪ್ರಕಟವಾದ ಎರಡನೇ ದಿನದಲ್ಲಿ ಈಡೇರಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!