ಉದ್ಯೋಗ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂ. ವಂಚಿಸಿದ ಮಹಿಳೆ
ಉಪ್ಪಿನಂಗಡಿ: ಸರಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿ 13.11 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಪೆರ್ಲದ ಸಚಿತಾ ರೈ ಎಂಬಾಕೆಯ ವಿರುದ್ಧ ಕೊಯಿಲ ನಿವಾಸಿ ರಕ್ಷಿತಾ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಲದ ಅಶ್ವಿನ್ ಕುಮಾರ್ ಶೆಟ್ಟಿ ಎಂಬವರ ಪತ್ನಿ ರಕ್ಷಿತಾ ಅವರ ಕ್ಲಾಸ್‍ಮೇಟ್ ಆಗಿದ್ದ ಸಚಿತಾ ರೈ ಕೇರಳದಲ್ಲಿ ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿ 2,50,000 ರೂ. ಹಣವನ್ನು ನೀಡುವಂತೆ ಕೇಳಿದ ಮೇರೆಗೆ ಸೆ.12ರಂದು 2,50,000 ರೂ. ಹಣವನ್ನು ರಕ್ಷಿತಾ ಕಳುಹಿಸಿಕೊಟ್ಟಿದ್ದರು. ಇದಾದ ಬಳಿಕ ಸಚಿತಾ ಪುತ್ತೂರು ಎಸ್.ಬಿ.ಐ ಬ್ಯಾಂಕ್‍ನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಇದಕ್ಕೆ ಹಣ ನೀಡುವಂತೆ ಕೇಳಿದ್ದು ಒಟ್ಟು 13,11,600ರೂ. ಬ್ಯಾಂಕ್ ಮುಖೇನ ನೀಡಿದ್ದು ನಂತರ ಆರೋಪಿ ಕೆಲಸವನ್ನು ಕೊಡಿಸದೆ ತನ್ನಿಂದ ಪಡೆದುಕೊಂಡಿರುವ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರು ತ್ತಾಳೆಂದು ರಕ್ಷಿತಾ ಅವರು ದೂರಿನಲ್ಲಿ ತಿಳಿಸಿದ್ದಾರೆ.