ಅಂತಾರಾಷ್ಟ್ರೀಯಕ್ರೀಡೆ

ಟಿ20 ಕ್ರಿಕೆಟ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿ ಇತಿಹಾಸ ನಿರ್ಮಿಸಿದ ಜಿಂಬಾಬ್ವೆ..!

ಟಿ20 ಮಾದರಿಯಲ್ಲಿ ಕ್ರಿಕೆಟ್ ನಲ್ಲಿ ಅತಿಹೆಚ್ಚು ರನ್ ಕಲೆ ಹಾಕಿದ ತಂಡವಾಗಿ ಜಿಂಬಾಬ್ವೆ ಇತಿಹಾಸ ಸೃಷ್ಟಿಸಿದೆ. ಅಕ್ಟೋಬರ್ 23ರಂದು ಕೀನ್ಯಾದ ನೈರೋಬಿಯಲ್ಲಿ ನಡೆದ ಟಿ20 ವಿಶ್ವಕಪ್ ಸಬ್ರೀಜನಲ್ಆಫ್ರಿಕಾ ಕ್ವಾಲಿಫೈಯರ್ ಗ್ರೂಪ್ ಬಿ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ಜಿಂಬಾಬ್ವೆ ದಾಖಲೆ ನಿರ್ಮಿಸಿದೆ.

ನಾಯಕ ಸಿಕಂದರ್ ರಜಾ ಅವರ ಬ್ಯಾಟಿಂಗ್ ಆರ್ಭಟ ವಿಶೇಷ ಆಕರ್ಷಣೆಯಾಗಿತ್ತು. ಅವರು 133 ರನ್‌ಗಳ ಅಜೇಯ ಇನ್ನಿಂಗ್ಸ್‌ ಕಟ್ಟಿದರ ಫಲವಾಗಿ ಜಿಂಬಾಬ್ವೆ ತಂಡ ನಿಗದಿತ 20 ಓವರ್ ಗಳಲ್ಲಿ ಬೃಹತ್ 344 ರನ್ ಕಲೆ ಹಾಕಿತು.

ಇದರೊಂದಿಗೆ ಜಿಂಬಾಬ್ವೆ ಟಿ20 ಇತಿಹಾಸದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ದೊಡ್ಡ ಮೊತ್ತ ದಾಖಲಿಸಿದ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 314 ರನ್ ಗಳಿಸಿತ್ತು. ಇದೀಗ ಜಿಂಬಾಬ್ವೆ 344 ರನ್ ಬಾರಿಸುವ ಮೂಲಕ ನೇಪಾಳದ ದಾಖಲೆಯನ್ನು ಮುರಿದು ಹಾಕಿದೆ.

ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಗಳಿಸಿತ್ತು. ಇದು ಟಿ20 ಕ್ರಿಕೆಟ್‌ನಲ್ಲಿ ತಂಡವೊಂದು ಗಳಿಸಿದ ಎರಡನೇ ಅತಿಹೆಚ್ಚು ರನ್ ಆಗಿತ್ತು. ಈಗ ಭಾರತ ಮೂರನೇ ಸ್ಥಾನದಲ್ಲಿದೆ. ನಂತರ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 278 ರನ್ ಕಲೆ ಹಾಕಿ 4ನೇ ಸ್ಥಾನದಲ್ಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪವರ್‌-ಪ್ಲೇನಲ್ಲಿ ಎರಡನೇ ಗರಿಷ್ಠ ಸ್ಕೋರ್ ಗಳಿಸಿತು. 6 ಓವರ್‌ಗಳ ನಂತರ ಜಿಂಬಾಬ್ವೆ 1 ವಿಕೆಟ್‌ ನಷ್ಟಕ್ಕೆ 103 ರನ್‌ ಕಲೆ ಹಾಕಿತ್ತು. ಬ್ರಿಯಾನ್ ಬೆನೆಟ್ 50 ರನ್ ಗಳಿಸಿದರೆ, ತಡಿವಾನಾಶೆ ಮರುಮನಿ 19 ಎಸೆತಗಳಲ್ಲಿ 62 ರನ್ ಚಚ್ಚಿದರು. ಇದಾದ ಬಳಿಕ ಕ್ರೀಸ್‌ಗೆ ಬಂದ ನಾಯಕ ಸಿಕಂದರ್ ರಜಾ ಸ್ಪೋಟಕ ಬ್ಯಾಟಿಂಗ್‌ನಿಂದ ಭರ್ಜರಿ ಅಜೇಯ ಶತಕ ಸಿಡಿಸಿ ಮಿಂಚಿದರು. ಅವರು ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 15 ಸಿಕ್ಸರ್ ನೆರವಿನಿಂದ 133 ರನ್ ಹೊಡೆದರು. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಜಿಂಬಾಬ್ವೆ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕೇವಲ 33 ಎಸೆತಗಳಲ್ಲಿ ರಜಾ ಶತಕ ಸಿಡಿಸಿದರು.

ಜಿಂಬಾಬ್ವೆ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‌ಗಳಿಗೆ ಆಲೌಟ್ ಆಯಿತು. ಆಂಡ್ರೆ ಜಾರ್ಜು (12) ಮಾತ್ರ ತಂಡದ ಪರ ಎರಡಂಕಿ ರನ್ ಗಳಿಸಿದರು. ಜಿಂಬಾಬ್ವೆ ಪರ ರಿಚರ್ಡ್ ಮತ್ತು ಬ್ರಾಂಡನ್ ತಲಾ 3 ವಿಕೆಟ್ ಕಬಳಿಸಿ ಗೆಲುವಿಗೆ ಕಾರಣರಾದರು. ಜಿಂಬಾಬ್ವೆ ಬರೋಬ್ಬರಿ 290 ರನ್‌ಗಳಿಂದ ಗೆಲುವು ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರೀ ಅಂತರದಲ್ಲಿ ಗೆದ್ದ ತಂಡ ಎಂಬ ವಿಶ್ವ ದಾಖಲೆ ಬರೆದಿದೆ. ಈ ಹಿಂದೆ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 273 ರನ್‌ಗಳಿಂದ ಭರ್ಜರಿ ಜಯ ಕಂಡಿತ್ತು.

ಈ ಪಂದ್ಯದಲ್ಲಿ ಬರೋಬ್ಬರಿ 27 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಿಂಬಾಬ್ವೆ ತಂಡ, ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ತಂಡವೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಹಿಂದೆ ಈ ದಾಖಲೆ 26 ಸಿಕ್ಸರ್ ಬಾರಿಸಿದ್ದ ನೇಪಾಳ ತಂಡದ ಹೆಸರಿನಲ್ಲಿತ್ತು.

ಪಂದ್ಯದಲ್ಲಿ 57 ಬೌಂಡರಿಗಳನ್ನು ಬಾರಿಸಿದ ಜಿಂಬಾಬ್ವೆ, ಟಿ20 ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧ 47 ಬೌಂಡರಿ ಬಾರಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲೇ ಈ ದಾಖಲೆಯೂ ಇತ್ತು. ಈ ಪಂದ್ಯದಲ್ಲಿ ಬರೋಬ್ಬರಿ 27 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಿಂಬಾಬ್ವೆ ತಂಡ, ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ತಂಡವೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಹಿಂದೆ ಈ ದಾಖಲೆ 26 ಸಿಕ್ಸರ್ ಬಾರಿಸಿದ್ದ ನೇಪಾಳ ತಂಡದ ಹೆಸರಿನಲ್ಲಿತ್ತು.

Leave a Reply

Your email address will not be published. Required fields are marked *

error: Content is protected !!