ಪೇಜರ್ ಸ್ಪೋಟ ಬೆನ್ನಲ್ಲೇ ಮತ್ತೊಂದು ಬೆಚ್ಚಿ ಬೀಳಿಸುವ ಸ್ಪೋಟ..!
ಹಿಜ್ಬುಲ್ಲಾ ಸಂಘಟನೆಯನ್ನು ಗುರಿಯಾಗಿಸಿ ಪೇಜರ್ ಸ್ಫೋಟ ಘಟನೆಯ ಬೆನ್ನಲ್ಲೇ ಲೆಬನಾನ್ ನಲ್ಲಿ ಸಂಭವಿಸಿದ ವಾಕಿಟಾಕಿ ಮತ್ತು ಫೋನ್ ಸ್ಫೋಟ ಘಟನೆಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯಪ್ರಾಚ್ಯ ದೇಶದಲ್ಲಿ ಪೇಜರ್ ಸ್ಫೋಟ ಘಟನೆಯಲ್ಲಿ 12 ಮಂದಿ ಮೃತಪಟ್ಟು, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದೀಗ ಇನ್ನೊಂದು ಘಟನೆಯಲ್ಲಿ ವಾಕಿಟಾಕಿಗಳು ಸಹಿತ ಹಲವು ಸಾಧನಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.
ಪೂರ್ವ ಲೆಬನಾನ್ ನ ಹಲವು ಕಡೆಗಳಲ್ಲಿ ಲ್ಯಾಂಡ್ ಲೈನ್ ದೂರವಾಣಿಗಳು ಕೂಡಾ ಸ್ಫೋಟಗೊಂಡಿದ್ದು ಕೈಯಲ್ಲಿ ಹಿಡಿಯುವ ವೈರ್ಲೆಸ್ ಅಥವಾ ವಾಕಿ ಟಾಕಿಗಳನ್ನು ಐದು ತಿಂಗಳು ಮುನ್ನ ಖರೀದಿಸಲಾಗಿದ್ದು, ಪೇಜರ್ ಗಳನ್ನು ಖರೀದಿಸಿದ ಸಂದರ್ಭದಲ್ಲೇ ಇದು ಕೂಡಾ ಕೈಸೇರಿದೆ ಎನ್ನಲಾಗುತ್ತಿದೆ.
ದಕ್ಷಿಣ ಲೆಬನಾನ್ ಮತ್ತು ಬೈರೂತ್ ನಗರದ ಉಪನಗರಗಳಲ್ಲಿ ಸ್ಫೋಟ ಸಂಭವಿಸಿದೆ. ಪೇಜರ್ ದುರಂತದಲ್ಲಿ ಮೃತಪಟ್ಟ ಹಿಜ್ಬುಲ್ಲಾ ಕಾರ್ಯಕರ್ತನ ಅಂತ್ಯಸಂಸ್ಕಾರ ಸಂದರ್ಭದಲ್ಲೇ ಸ್ಫೋಟವೊಂದು ಸಂಭವಿಸಿದೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದ್ದು ಹಿಜ್ಬುಲ್ಲಾ ಸಂಘಟನೆಯು, ಪೇಜರ್ ಸ್ಫೋಟಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.