ಕರಾವಳಿರಾಜಕೀಯ

ನ್ಯಾಯವಾದಿ ನೂರುದ್ದೀನ್ ಸಾಲ್ಮರರವರಿಗೆ ಪುಡಾ ಅಧ್ಯಕ್ಷ ಸ್ಥಾನ ನೀಡಲು ಆಗ್ರಹಿಸಿ ವಾಟ್ಸಪ್ ಅಭಿಯಾನ

ಪುತ್ತೂರು: ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ, ಜಿಲ್ಲಾ ಮತ್ತು ರಾಜ್ಯಮಟ್ಟದ ನಾಯಕನಾಗಿ ಗುರುತಿಸಲ್ಪಟ್ಟ, ನೂರುದ್ದೀನ್ ಸಾಲ್ಮರ ರವರಿಗೆ, ಪಕ್ಷದಿಂದ, ಸರಕಾರ ಮಟ್ಟದಲ್ಲಿ ನೀಡುವಂತಹ ಉನ್ನತ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ವಾಟ್ಸಪ್ ಮೂಲಕ ಅಭಿಯಾನ ಶುರು ಮಾಡಿದ್ದಾರೆ.

ಯುಟಿ ಖಾದರ್, ಟಿಎಂ ಶಹೀದ್, ನಜೀರ್ ಮಠ ರೊಂದಿಗೆ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆ (ಎನ್ಎಸ್ ಯು ಐ) ಯ ಮೂಲಕ ತಮ್ಮ ವಿದ್ಯಾರ್ಥಿ ದೆಸೆಯಲ್ಲಿ, ರಾಜಕೀಯ ಹೋರಾಟಕ್ಕೆ ಧುಮುಕಿದ ನೂರುದ್ದೀನ್ ರವರು ಎಂದು ಜಾತ್ಯಾತೀತ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡವರಲ್ಲ. ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದೆ ಇರಲಿ, ಪಕ್ಷ ಯಾರನ್ನೇ ಆದರೂ ಅಭ್ಯರ್ಥಿಯನ್ನಾಗಿ ಸೂಚಿಸಿದ ಸಮಯದಲ್ಲೂ, ಪಕ್ಷದ ಅಭ್ಯರ್ಥಿ ವಿರುದ್ಧ ಸಮರ ಸಾರಿದವರಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಪಕ್ಷದ ಅಭ್ಯರ್ಥಿಯ ವಿಜಯಕ್ಕಾಗಿ ವಿಟ್ಲ ಉಪ್ಪಿನಂಗಡಿ ಬ್ಲಾಕನ ಉಸ್ತುವಾರಿಯನ್ನು ವಹಿಸಿಕೊಂಡು, ತನ್ನ ಚಾಣಾಕ್ಷ ನಡೆಯ ಮೂಲಕ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷದ ಅಭ್ಯರ್ಥಿಯ ವಿಜಯಕ್ಕಾಗಿ ಶ್ರಮಿಸಿ ಯಶಸ್ವಿಯಾಗಿದ್ದರು. ಮಾತ್ರವಲ್ಲ ಪಕ್ಷ ಏನೇ ಜವಾಬ್ದಾರಿ ಕೊಟ್ಟರು ಅದನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದರು. ಉತ್ತಮ ಮಾತುಗಾರರು ಹಾಗೂ ಖ್ಯಾತ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ನೂರುದ್ದೀನ್ ರವರಿಗೆ ಪಕ್ಷ ಉನ್ನತ ಸ್ಥಾನಮಾನ ನೀಡಲೇಬೇಕೆಂದು  ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ವ್ಯಕ್ತವಾಗಿದೆ. ಈಗಾಗಲೇ ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಅವರ ರಾಜೀನಾಮೆಯಿಂದ ತೆರವಾಗಿರುವ ಪುಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ ಮಹಮ್ಮದ್ ಆಲಿ ಅವರ ಹೆಸರು ಪ್ರಬಲವಾಗಿ ಕೇಳಿ ಬಂದಿದ್ದು, ಲ್ಯಾನ್ಸಿ ಮಾಸ್ಕೆರರೇನ್ಹಸ್ ಅವರೂ ರೇಸ್’ನಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!