ಕಾಂಗ್ರೆಸ್ ಸೇರಿದ ಕುಸ್ತಿ ಪಟು ಬಜರಂಗ್ ಪುನಿಯಾಗೆ ಬೆದರಿಕೆ ಸಂದೇಶ
ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕುಸ್ತಿ ಪಟು ಬಜರಂಗ್ ಪುನಿಯಾರವರಿಗೆ ಸೇರ್ಪಡೆ ಬೆನ್ನಲ್ಲೇ ಬೆದರಿಕೆ ಸಂದೇಶಗಳು ಬರಲಾರಂಭಿಸಿವೆ. ನೀವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಸಂದೇಶ ಬಂದಿರುವುದಾಗಿ ಬಜರಂಗ್ ಪುನಿಯಾ ಸೋನಿಪತ್‌ನ ಬಹಲ್‌ಗಢ ಪೊಲೀಸ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪುನಿಯಾ ಅವರಿಂದ ದೂರನ್ನು ಸ್ವೀಕರಿಸಿದ್ದು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಂಗ್ರೆಸ್ ತೊರೆಯುವಂತೆ ಅಥವಾ ಭೀಕರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ ಎಂಬ ಬೆದರಿಕೆ ಸಂದೇಶದಲ್ಲಿ ಪುನಿಯಾ ಅವರಿಗೆ ಬಂದಿದೆ ಎಂದು ವರದಿಗಳು ಹೇಳುತ್ತಿವೆ.
ಆದಷ್ಟು ಬೇಗ ಕಾಂಗ್ರೆಸ್ ತೊರೆಯಬೇಕು ಇಲ್ಲದಿದ್ದರೆ ನಿಮಗೂ, ನಿಮ್ಮ ಕುಟುಂಬಕ್ಕೂ ಕಂಟಕ ಕಾದಿದೆ. ಇದು ನಮ್ಮ ಕೊನೆಯ ಸಂದೇಶ. ಚುನಾವಣೆಗೂ ಮುನ್ನ ನಾವೇನು ಎಂಬುದನ್ನು ತೋರಿಸುತ್ತೇವೆ. ನೀವು ಎಲ್ಲಿ ಬೇಕಾದರೂ ದೂರು ನೀಡಿ, ಇದು ನಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ’ ಎಂದು ಅನಾಮಿಕ ವ್ಯಕ್ತಿಯಿಂದ ಸಂದೇಶ ಬಂದಿದೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.