ವಿಟ್ಲ: ನಕಲಿ ವಿಳಾಸದಲ್ಲಿ ಪಾಸ್‌ಪೋರ್ಟ್ ಮಾಡಲು ಸಹಕರಿಸಿದ ಆರೋಪ: ಪೊಲೀಸ್ ಸಿಬ್ಬಂದಿಯ ಬಂಧನ
ವಿಟ್ಲ: ಪಶ್ಚಿಮ ಬಂಗಾಳ ಮೂಲದವನು ಎಂದು ಹೇಳಲಾದ ವ್ಯಕ್ತಿಯನ್ನು ವಿಟ್ಲ ಠಾಣಾ ವ್ಯಾಪ್ತಿಯ ನಿವಾಸಿ ಎಂದು ನಕಲಿ ದಾಖಲೆ ಸಲ್ಲಿಸಿ ಪಾಸ್‌ಪೋರ್ಟ್ ಮಾಡಲು ಸಹಕರಿಸಿದ ಆರೋಪದಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ಬಂಧಿತ ಆರೋಪಿ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಪಶ್ಚಿಮ ಬಂಗಾಳ ಮೂಲದವನು ಎಂದು ಹೇಳಲಾದ ಶಕ್ತಿದಾಸ್ ಎಂಬ ವ್ಯಕ್ತಿ 2025ರ ಫೆಬ್ರವರಿ ತಿಂಗಳಲ್ಲಿ ಪಾಸ್ ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ಬಗ್ಗೆ ಪೊಲೀಸ್ ಪರಿಶೀಲನೆಗೆ ವಿಟ್ಲ ಪೊಲೀಸ್ ಠಾಣೆಗೆ ಬಂದಿತ್ತು. ಪರಿಶೀಲನೆ ಮಾಡುವ ವೇಳೆ ಅರ್ಜಿದಾರರ ವಿಳಾಸವು ದಾಖಲಾತಿಗಳಲ್ಲಿನ ವಿಳಾಸಕ್ಕೆ ತಾಳೆಯಾಗದಿರುವುದರಿಂದ ಅದನ್ನು ಬೀಟ್ ಪೊಲೀಸ್ ಸಿಬ್ಬಂದಿ ಮಿರ್ಜಿ ಸಾಬ್ ರಿಜೆಕ್ಟ್ ಮಾಡಿದ್ದರು.
ಅದೇ ವ್ಯಕ್ತಿ 2025ರ ಜೂನ್ ತಿಂಗಳಿನಲ್ಲಿ ಮರು ಅರ್ಜಿಯನ್ನು ಸಲ್ಲಿಸಿದ್ದಾನೆ. ಮರು ಅರ್ಜಿಯನ್ನು ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್, ಅರ್ಜಿದಾರರ ವಿಳಾಸವಿರುವ ಬೀಟ್ ಸಿಬ್ಬಂದಿ ಸಾಬು ಮಿರ್ಜಿ ಎಂಬವರ ಅರಿವಿಗೆ ಬಾರದಂತೆ, ಅವರ ಹೆಸರಿನಲ್ಲಿ ವರದಿ ತಯಾರಿಸಿ, ಸಹಿಯನ್ನು ಫೋರ್ಜರಿ ಮಾಡಿ, ಮೇಲಾಧಿಕಾರಿಯವರಿಂದ ಶಿಫಾರಸ್ಸು ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ. ಹಾಗೂ ಪರಿಶೀಲನಾ ದಾಖಲೆಗಳನ್ನು ಯಾರಿಗೂ ತಿಳಿಯಬಾರದೆಂದು ನಾಶಪಡಿಸಿದ್ದಾರೆ.
2025 ಡಿ.19ರಂದು ದಾಖಲೆಯನ್ನು ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೇಂದ್ರ ಸರಕಾರದಿಂದ ನೀಡಲ್ಪಡುವ ಅತೀ ಪ್ರಮುಖ ಗುರುತಿನ ಚೀಟಿ ಪಾಸ್ ಪೋರ್ಟ್ ನ್ನು ಅಪರಾಧಿಕ ನಂಬಿಕೆ ದ್ರೋಹ ಬಗೆದು ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಹಾಗೂ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಮಾಡಿ ಕಡತವನ್ನು ನಾಶಪಡಿಸಿದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ಹಾಗೂ ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದ ಶಕ್ತಿದಾಸ್ ಎಂಬವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 193/2025, ಕಲಂ: 336, 337, 316(5), 238 ಬಿಎನ್ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.
ಆರೋಪಿ ಪ್ರದೀಪ್‌ನನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಮುಖ ಆರೋಪಿ ಶಕ್ತಿದಾಸ್ ಪೊಲೀಸ್ ವಶದಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.



