ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯ ಅಟ್ಟಾಡಿಸಿ ಕೊಲೆ
ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಅಟ್ಟಾಡಿಸಿ ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ. ಕಲ್ಲಾಪುನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಉಳ್ಳಾಲ ಕಡಪ್ಪುರ ನಿವಾಸಿ ಸಮೀರ್ (35ವ) ಕೊಲೆಯಾದವರು. ರಾತ್ರಿ ಗಂಟೆ 10ರ ಅಂದಾಜಿಗೆ ತಾಯಿ ಜೊತೆಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಕಾರಿನಲ್ಲಿ ಬಂದ ತಂಡ ಸಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಸಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ್ದು, ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ನಿನಿಂದ 500 ಮೀ ದೂರದಲ್ಲಿರುವ ಫರ್ನಿಚರ್ ಅಂಗಡಿಯೊಂದರ ಹಿಂಭಾಗದವರೆಗೆ ಅಟ್ಟಾಡಿಸಿಕೊಂಡು ಹೋಗಿ, ಅಲ್ಲಿ ತಲವಾರಿನಿಂದ ಕಡಿದು ಹತ್ಯೆ ನಡೆಸಿರುವುದಾಗಿ ತಿಳಿದು ಬಂದಿದೆ.
2018ರಲ್ಲಿ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣದಲ್ಲಿ ಶಮೀರ್ ಎರಡನೇ ಆರೋಪಿಯಾಗಿದ್ದ. ಜೈಲಿನಲ್ಲಿದ್ದ ಶಮೀರ್ ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.