ಕುಂಬ್ರ: ರಸ್ತೆ ಬದಿಯ ತಡೆಬೇಲಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆ ಬೇಲಿಗೆ ಡಿಕ್ಕಿಯಾದ ಕ್ರೇಟಾ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಜು.28ರಂದು ಮದ್ಯಾಹ್ನ ಕುಂಬ್ರದಲ್ಲಿ ನಡೆದಿದೆ.
ಕುಂಬ್ರ ಜಂಕ್ಷನ್ನಲ್ಲಿ ರಸ್ತೆ ಬದಿ ಅಳವಡಿಸಿರುವ ಕಬ್ಬಿಣದ ತಡೆ ಬೇಲಿಗೆ ಕಾರು ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಮಕ್ಕಳು ಸೇರಿದಂತೆ ಚಾಲಕ ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಾರು ಜಖಂಗೊಂಡಿದೆ. ರಸ್ತೆ ಬದಿಯ ತಡೆಬೇಲಿ ಮುರಿದು ಬಿದ್ದಿದೆ. ಕಾರು ಪಲ್ಟಿಯಾದ ವೇಳೆ ಸ್ಥಳೀಯರು ಆಗಮಿಸಿ ಕಾರಿನಲ್ಲಿದ್ದವರನ್ನು ಹೊರಗೆ ಬರಲು ಸಹಕಾರ ನೀಡಿದ್ದಾರೆ. ಕಾರು ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.