ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಬಜೆಟ್ ನಲ್ಲಿ ರಾಜ್ಯಕ್ಕೆ ಏನನ್ನೂ ಕೊಟ್ಟಿಲ್ಲ: ಸಿದ್ದರಾಮಯ್ಯ
ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕವನ್ನು ಕಡೆಗಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ರಾಜ್ಯದ ಐವರು ಸಚಿವರಿದ್ದರೂ ಏನನ್ನೂ ಕೊಟ್ಟಿಲ್ಲ. ರಾಜ್ಯದ ಎಚ್.ಡಿ.ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ. ಕೈಗಾರಿಕಾ ಕ್ಷೇತ್ರ, ರೈಲ್ವೆ ಇಲಾಖೆಗೂ ಏನನ್ನೂ ಕೊಟ್ಟಿಲ್ಲ. ಬಜೆಟ್ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಪಂಗನಾಮ ಹಾಕಿದೆ. ಇದು ನಿರಾಸದಾಯಕ, ಜನವಿರೋಧಿ ಬಜೆಟ್. ರೈತರು, ಬಡವರು, ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಜೆಟ್ ನಲ್ಲಿ ರಾಜ್ಯಕ್ಕೆ ಒಂದು ರೀತಿ ಚೊಂಬು ಕೊಟ್ಟಿದ್ದಾರೆ. ಬಿಹಾರ, ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳಿಗೆ ಏನೂ ಇಲ್ಲ. ದೇಶದ ಯಾವುದೇ ರಾಜ್ಯಗಳಿಗೆ ಬಜೆಟ್ನಲ್ಲಿ ಅನುದಾನ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕಕ್ಕೆ ವಿಶೇಷ ಅನುದಾನ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದ್ರೆ, ಕರ್ನಾಟಕಕ್ಕೆ ಯಾವುದೇ ಅನುದಾನ ನೀಡದೆ ನಿರ್ಲಕ್ಷಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ, ಪೆರಿಫೆರಲ್ ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ನಿರ್ಮಲಾ ಸೀತಾರಾಮನ್ ಮೇಲಿದ್ದ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ ಎಂದು ಹೇಳಿದ್ದಾರೆ.