ಅವಮಾನ ಮಾಡಿದವರಿಂದಲೇ ಸನ್ಮಾನ.!
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ ಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಫಕೀರಪ್ಪ ಎಂಬ ವೃದ್ಧ ಪಂಚೆ ಧರಿಸಿದ್ದರು ಎನ್ನುವ ಕಾರಣಕ್ಕೆ ಮಾಲ್ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ರೈತ ಫಕೀರಪ್ಪಗೆ ಅವಮಾನ ಮಾಡಿದ್ದ ಮಾಲ್ ನಲ್ಲೇ ಸನ್ಮಾನ ಮಾಡಲಾಗಿದೆ. ರೈತ ಫಕೀರಪ್ಪಗೆ ಶಾಲು ಹಾಕಿ ಸನ್ಮಾನಿಸಲಾಗಿದೆ. ಮಾಲ್ ಇನ್ಚಾರ್ಜ್ ಸುರೇಶ್ ಅವರು ಫಕೀರಪ್ಪರನ್ನು ಸನ್ಮಾನಿಸಿ ಅವರಲ್ಲಿ ಕ್ಷಮೆಯನ್ನೂ ಯಾಚಿಸಿದ್ದಾರೆ.
ರೈತ ಫಕೀರಪ್ಪ ಪಂಚೆ ಧರಿಸಿ ಮಾಲ್ ಗೆ ಬಂದಿದ್ದರು. ವೃದ್ಧ ಫಕೀರಪ್ಪ ಮತ್ತು ಅವರ ಮಗ ನಾಗರಾಜ್ ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಇದ್ದು ವಿನಂತಿಸಿದರು ಕೂಡಾ ಒಳಗೆ ಬಿಟ್ಟಿರಲಿಲ್ಲ. ಇದರಿಂದ ಅವಮಾನಕ್ಕೊಳಗಾದ ಫಕೀರಪ್ಪನವರ ಪುತ್ರ ನಾಗರಾಜ್ ಮಾಲ್ ನ ಒಳಗೆ ಪ್ರವೇಶ ನೀರಾಕರಣೆ ಮಾಡಿದ ಬಗ್ಗೆ ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ಇದು ವೈರಲ್ ಆಗಿತ್ತಲ್ಲದೆ ರೈತ ಸಂಘಟನೆಯವರಿಗೆ ಮತ್ತು ಕನ್ನಡ ಪರ ಹೋರಾಟಗಾರರಿಗೆ ಗೊತ್ತಾಗಿ ಅವರು ಮಾಲ್ ಎದುರು ಪ್ರತಿಭಟನೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಮಾಲ್ ಇನ್ಚಾರ್ಜ್ ಸುರೇಶ್ ಕ್ಷಮೆ ಕೇಳಿದರೂ ಹೋರಾಟಗಾರರು ಕ್ಯಾರೆ ಅಂದಿಲ್ಲ. ಮ್ಯಾನೇಜರ್ ಬರಬೇಕು ಎಂದು ಪಟ್ಟು ಹಿಡಿದಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ರೈತ ಫಕೀರಪ್ಪರನ್ನು ಮಾಲ್ ಗೆ ಕರೆಸಿಕೊಂಡು ಮಾಲ್ ನ ಒಳಗೆ ಸನ್ಮಾನ ಮಾಡಿ ಮಾಲ್ ನವರು ಕ್ಷಮೆ ಕೇಳಿದ್ದಾರೆ.