ಉತ್ತರ ಕನ್ನಡ: ಹೆದ್ದಾರಿಗೆ ಗುಡ್ಡ ಕುಸಿತ, ಕನಿಷ್ಠ 7 ಸಾವು?
ಉತ್ತರ ಕನ್ನಡದ ಕಾರವಾರ-ಕುಮಟಾ ರಸ್ತೆಯ ಅಂಕೋಲಾ ಸಮೀಪದ ಶಿರೂರು ಗ್ರಾಮದಲ್ಲಿ ಜುಲೈ 16ರಂದು ಬೆಳಗ್ಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ ಎಂದು ಸಂಶಯಿಸಲಾಗಿದೆ.

7 ಮಂದಿಯ ಪೈಕಿ ಐವರು ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದ್ದು ಇವರು ರಾಷ್ಟ್ರೀಯ ಹೆದ್ದಾರಿ ಬದಿ ಹೋಟೆಲ್ ನಡೆಸುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆ ಗುಡ್ಡ ಅಂಗಡಿಯ ಮೇಲೆ ಕುಸಿದು ಬಿದ್ದಿದ್ದು, ಪರಿಣಾಮ ಸ್ಥಳದಲ್ಲಿದ್ದವರು ಹಾಗೂ ವಾಹನಗಳು ಕೂಡ ಮಣ್ಣಿನಡಿ ಸಿಲುಕಿಕೊಂಡಿದೆ.
ಕ್ಷಣಾರ್ಧದಲ್ಲಿ ಗುಡ್ಡ ಕುಸಿದು ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದೆ. ಗುಡ್ಡ ಕುಸಿತದ ವೇಳೆ ಕಾರೊಂದು ಅದೇ ರಸ್ತೆಯಲ್ಲಿ ಹೋಗುತ್ತಿದ್ದು ಕಾರಿನಲ್ಲಿ 5 ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರಬಹುದು ಎಂದು ಸಂಶಯಿಸಲಾಗಿದೆ.
ಈ ನಡುವೆ ಗಂಗವಳ್ಳಿ ನದಿಯಲ್ಲಿ ಬೃಹತ್ ಟ್ಯಾಂಕರ್ ಕಂಡು ಬಂದಿದ್ದು ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ಗುಡ್ಡ ಕುಸಿತದಿಂದ ಗಂಗವಳ್ಳಿ ನದಿಗೆ ಬಿದ್ದು ಕೊಚ್ಚಿಹೋಗಿದೆ ಎನ್ನಲಾಗುತ್ತಿದೆ.
ಘಟನೆ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ ಎಂದು ತಿಳಿದು ಬಂದಿದೆ. ಮಣ್ಣಿನಡಿಯಲ್ಲಿ ಎಷ್ಟು ಜನರು ಸಿಲುಕಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.