ಪುತ್ತೂರು ಸರಕಾರಿ ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ದಿಢೀರ್ ಭೇಟಿ
ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ ಹಾಗೂ ಆಸ್ಕರ್ ಆನಂದ್ ರವರು ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಲ್ಯಾಬ್ ವ್ಯವಸ್ಥೆ ಸರಿಯಾಗಿಲ್ಲ, ಸಂಜೆ ನಾಲ್ಕರ ಬಳಿ ಅಲ್ಲಿ ಯಾವುದೇ ರಕ್ತ ಪರೀಕ್ಷೆಗಳು ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸಾರ್ವಜನಿಕರು ಸಾಮಾಜಿಕ ತಾಣದಲ್ಲಿ ವ್ಯಕ್ತಪಡಿಸಿದ ಕೆಲವೊಂದು ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ಆಸ್ಪತ್ರೆಗೆ ಭೇಟಿ ನೀಡಿದರು.
ಲ್ಯಾಬ್ ನಲ್ಲಿಕ್ಯೂ
ಆಸ್ಪತ್ರೆಗೆ ಭೇಟಿ ನೀಡುವ ವೇಳೆ ಲ್ಯಾಬ್ ನಲ್ಲಿ ರಕ್ತ ಪರೀಕ್ಣೆಗೆ ಜನರು ಕ್ಯೂ ನಿಂತಿದ್ದರು. ಜನರ ಕ್ಯೂ ತುಂಬಾ ಉದ್ದವಾಗಿತ್ತು. ನೇರವಾಗಿ ಲ್ಯಾಬ್ ಒಳಗೆ ತೆರಳಿದ ಸುದೇಶ್ ಶೆಟ್ಟಿಯವರು ವ್ಯವಸ್ಥೆ ಬಗ್ಗೆ ಅಲ್ಲಿನ ಸಿಬಂದಿಗಳಿಂದ ತಿಳಿದುಕೊಂಡರು. ಸದ್ಯಕ್ಕೆ 5 ಮಂದಿ ಸಿಬಂದಿಗಳಿದ್ದಾರೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ರತನಕ ನಾವು ರಕ್ತ ಪರೀಕ್ಷೆ ಮಾಡುತ್ತೇವೆ. ಸಿಬಂದಿಗಳ ಪೈಕಿ ಓರ್ವರು ಬ್ಲಡ್ ಬ್ಯಾಂಕ್ ಗೂ ತೆರಳಬೇಕಾಗುತ್ತದೆ, ಕೋರ್ಟಿಗೆ ಅಗತ್ಯ ಬಿದ್ದರೆ ಅದಕ್ಕೂ ಒಬ್ಬರು ಸಿಬಂದಿ ತೆರಳಬೇಕಾಗುತ್ತದೆ. ದಿನಕ್ಕೆ 100 ರಿಂದ 130 ಮಂದಿ ರಕ್ತ ಪರೀಕ್ಷೆಗೆ ಬರುತ್ತಾರೆ. ರಕ್ತ ಪರೀಕ್ಷಾ ವರದಿಯನ್ನು ಆನ್ ಲೈನ್ ಮೂಲಕ ಅಪ್ಲೋಡು ಮಾಡಬೇಕು, ಕೆಲವೊಮ್ಮೆ ಯಂತ್ರ ಕೈಕೊಡುವುದೂ ಉಂಟು ಆಗ ಸಮಸ್ಯೆಯಾಗುತ್ತದೆ. ತುರ್ತುಸಂದರ್ಭದಲ್ಲಿ ರಾತ್ರಿ ವೇಳೆ ಓರ್ವ ಸಿಬಂದಿ ಬರುತ್ತಾರೆ. ಇಲ್ಲಿ ಲ್ಯಾಬ್ ಟೆಕ್ನಿಶಿಯನ್ ಕೊರತೆ ಇರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.
ಲ್ಯಾಬ್ ಟೆಕ್ನಿಶಿಯನ್ ಕೊರತೆ ಇದೆ: ಡಾ. ಆಶಾ ಪುತ್ತೂರಾಯ
ದಿನಂಪ್ರತಿ 100 ಕ್ಕೂ ಮಿಕ್ಕಿ ಮಂದಿ ರಕ್ತ ಪರೀಕ್ಷೆಗೆ ಬರುತ್ತಾರೆ. ಇಲ್ಲಿನ ಸಿಬಂದಿಗಳ ಕರ್ತವ್ಯದ ಬಗ್ಗೆ ತಿಳಿಸಿದ್ದಾರೆ. ಇಬ್ಬರು ಹೆಚ್ಚುವರಿ ಟೆಕ್ನಿಶಿಯನ್ ನೇಮಕ ಮಾಡಿದ್ದಲ್ಲಿ ಸಮಸ್ಯೆ ಇತ್ಯರ್ಥವಾಗಬಹುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಹೇಳಿದರು. ರಕ್ತ ಪರೀಕ್ಷೆಗೆ ಬಂದ ಎಲ್ಲರ ರಕ್ತ ಪರೀಕ್ಷೆಯನ್ನು ಮಾಡಲಾಗುತ್ತಿದೆ ಯಾರನ್ನೂ ಮರಳಿ ಕಳಿಸಿಲ್ಲ. ಸದ್ಯ ಡೆಂಗ್ಯೂ ಜ್ವರ ಇರುವ ಕಾರಣ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ.
ಶಾಸಕರಮೂಲಕ ಸಚಿವರಿಗೆ ಮನವಿ; ಸುದೇಶ್ ಶೆಟ್ಟಿ
ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ ಮಾತನಾಡಿ ಲ್ಯಾಬ್ ವ್ಯವಸ್ಥೆ ಚೆನ್ನಾಗಿದೆ. ಈಗ ಸಂಜೆ ನಾಲ್ಕೂವರೆ ತನಕ ಇದೆ ಅದನ್ನು ರಾತ್ರಿ 9 ಗಂಟೆಯತನಕ ವಿಸ್ತರಣೆ ಮಾಡಬೇಕಿದೆ. ಇಬ್ಬರು ಲ್ಯಾಬ್ ಟೆಕ್ನಿಶಿಯನ್ ನೇಮಕ ಅಗತ್ಯವಿದೆ. ಶಾಸಕ ಅಶೋಕ್ ರೈ ಮೂಲಕ ನಾವು ಆರೋಗ್ಯ ಸಚಿವರಿಗೆ ಇಲ್ಲಿನ ಲ್ಯಾಬ್ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಇಬ್ಬರು ಲ್ಯಾಬ್ ಟೆಕ್ನಿಶಿಯನ್ ಗಳನ್ನು ನೇಮಕ ಮಾಡುವುದು ಮತ್ತು ಹೊಸ ಯಂತ್ರದ ವ್ಯವಸ್ಥೆಯನ್ನುಮಾಡುವಂತೆ ಮನವಿ ಮಾಡಲಾಗುವುದು. ಸಾರ್ವಜನಿಕರ ಹಿತ ದೃಷ್ಟಿಯಿಂದ ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಲಾಗುವುದು. ಶಾಸಕರ ಸೂಚನೆಯಂತೆ ನಾವು ಕೆಲಸವನ್ನು ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.