ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಇಂದು (ಜು.4) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಬಾರ್ಬಡೋಸ್ನಿಂದ ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದ ಟೀಮ್ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿಗಳು, ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್‌ನಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಕಾರ್ಯದರ್ಶಿ ಜಯ್ ಶಾ ಕೂಡ ಹಾಜರಿದ್ದರು.

ಟೀಮ್ ಇಂಡಿಯಾವನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಕೆಲ ಹೊತ್ತು ಕುಶಲೋಪರಿ ನಡೆಸಿದರು. ಅಲ್ಲದೆ ಆ ಬಳಿಕ ಟೀಮ್ ಇಂಡಿಯಾ ಆಟಗಾರರು ಪ್ರಧಾನಿಯೊಂದಿಗೆ ಟಿ20 ವಿಶ್ವಕಪ್ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.