ನಮ್ಮ ಸರ್ಕಾರ ಇನ್ನೂ 20 ವರ್ಷ ಅಧಿಕಾರದಲ್ಲಿರಲಿದೆ: ಮೋದಿ
ನವದೆಹಲಿ: ಲೋಕಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜ್ಯಸಭೆಯಲ್ಲೂ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನವೆಂಬರ್ 24 ರಂದು ನಾವು ಸಂವಿಧಾನ ದಿನ ಆಚರಿಸಲು ನಿರ್ಧರಿಸಿದಾಗ ಈಗ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಿರುವವರು ಅದನ್ನು ವಿರೋಧಿಸಿದರು ಎಂದು ತಿರುಗೇಟು ನೀಡಿದರು.
ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ನಮ್ಮ ಸರ್ಕಾರ 10 ವರ್ಷಗಳನ್ನು ಪೂರೈಸಿದೆ, ಇನ್ನೂ 20 ವರ್ಷ ಪೂರೈಸಬೇಕಿದೆ. ಕಳೆದ 10 ವರ್ಷಗಳಲ್ಲಿ ಸಮರ್ಪಣಾ ಮನೋಭಾವ ಮತ್ತು ನಿರಂತರ ಸೇವೆಯೊಂದಿಗೆ ಮಾಡಿದ ಕೆಲಸವನ್ನು ಸಾರ್ವಜನಿಕರು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ನಾಡಿನ ಜನತೆ ಆಶೀರ್ವಾದ ಮಾಡಿದ್ದಾರೆ. ದೇಶದ ಜನತೆ ಅಪಪ್ರಚಾರವನ್ನು ಸೋಲಿಸಿದ್ದಾರೆ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ವಿಶ್ವಾಸ ರಾಜಕಾರಣಕ್ಕೆ ಗೆಲುವಿನ ಮುದ್ರೆ ಹಾಕಲಾಗಿದೆ ಎಂದರು.