ಪುಣಚ ಮಸೀದಿಯ ಖತೀಬರಿಗೆ ಕಾರು ಕೊಡುಗೆ ನೀಡಿದ ನಾಲ್ಕು ಮಂದಿ ಯುವಕರು
ಪುತ್ತೂರು: ಊರಿನ ನಾಲ್ಕು ಮಂದಿ ಯುವಕರು ಸೇರಿಕೊಂಡು ಮಸೀದಿಯ ಧರ್ಮಗುರುವೊಬ್ಬರಿಗೆ ಹೊಸ ಕಾರೊಂದನ್ನು ನೀಡಿದ್ದಾರೆ. ಪುಣಚ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಕಳೆದ 26 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ ಬಿ.ಎಂ ಮುಹಮ್ಮದ್ ದಾರಿಮಿ ಅವರಿಗೆ ಯುವಕರು ಕಾರು ನೀಡಿದ್ದು ಈ ಕಾರು ನೀಡಲು ಕಾರಣವಾದ ಅಂಶ ಕೂಡಾ ಗಮನಾರ್ಹವಾಗಿದೆ.
ಕಲ್ಲಡ್ಕ ನಿವಾಸಿಯಾಗಿರುವ ಬಿ.ಎಂ ಮುಹಮ್ಮದ್ ದಾರಿಮಿಯವರು ಪುಣಚ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪ್ರತೀ ಶನಿವಾರ ಮನೆಗೆ ಹೋಗಿ ಭಾನುವಾರ ಸಂಜೆ ವಾಪಸ್ ಮಸೀದಿಗೆ ಬರುತ್ತಿದ್ದರು. ಅವರು ಬಸ್ ಮೂಲಕ ಹೋಗಿ ಬರುತ್ತಿದ್ದರು. ಅವರಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಹಲವು ಬಾರಿ ಮನೆಗೆ ತಲುಪುವಾಗ ತಡ ರಾತ್ರಿಯೂ ಆಗುತ್ತಿತ್ತು. ಆದರೆ ತಮ್ಮ ಕಷ್ಟವನ್ನು ಅವರು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ಕೆಲ ಸಮಯಗಳ ಹಿಂದೆ ಬಿ.ಎಂ ಮುಹಮ್ಮದ್ ದಾರಿಮಿ ಬಸ್‌ಗೆ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಾಗಿ ಹೋಗುತ್ತಿದ್ದು ಆಜ್ಜಿನಡ್ಕದ ಆರಿಫ್ ಎಂಬವರು ನೋಡಿದ್ದರು. ಆರಿಫ್ ಅವರು ಪುತ್ತೂರಿಗೆ ಹೋಗಿ ವಾಪಸ್ ಪುಣಚಕ್ಕೆ ಬರುವ ವರೆಗೂ ಬಸ್ ಬಾರದ ಕಾರಣ ಉಸ್ತಾದ್ ಅಲ್ಲೇ ಕುಳಿತುಕೊಂಡಿದ್ದ ದೃಶ್ಯ ಆರಿಫ್ ಅವರ ಮನಸ್ಸಿಗೆ ಬಹಳ ಬೇಸರ ತಂದಿತ್ತು. ಬಳಿಕ ಮನೆಗೆ ಹೋದ ಆರಿಫ್ ಉಸ್ತಾದರ ವಿಚಾರವನ್ನು ಮನೆಯವರ ಜತೆಯೂ ಚರ್ಚೆ ನಡೆಸಿದ್ದರು. ಕೆಲ ಸಮಯದ ಬಳಿಕ ಆರಿಫ್ ಅವರು ತಮ್ಮಿಂದಾಗುವ ಮೊತ್ತ ಸಂಗ್ರಹಿಸಿ ಮುಹಮ್ಮದ್ ದಾರಿಮಿ ಅವರಿಗೆ ಕೊಟ್ಟು ಈ ಹಣದಲ್ಲಿ ನೀವೊಂದು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆಗ ಮುಹಮ್ಮದ್ ದಾರಿಮಿ ಅವರು ಜಮಾಅತ್ ಕಮಿಟಿ ಜೊತೆ ವಿಷಯ ತಿಳಿಸುತ್ತೇನೆ ಎಂದು ಹೇಳಿ ಅಶ್ರಫ್ ನಟ್ಟಿ ಅವರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ನಟ್ಟಿ ಅಂದುಂಞಿ ಹಾಜಿಯವರ ಪುತ್ರರಾದ ಅಶ್ರಫ್, ಸತ್ತಾರ್ ಮತ್ತು ಅಯ್ಯೂಬ್ ಅವರು ಅಜ್ಜಿನಡ್ಕ ಆರಿಫ್ ಜೊತೆ ಚರ್ಚೆ ನಡೆಸಿದರು. ಬಳಿಕ ಆರಿಫ್ ಅವರ ಹಣವನ್ನು ಸೇರಿಸಿ ಕಾರು ಖರೀದಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡರು.
ನಾಲ್ವರು ಕೂಡಾ ಅಭಿಪ್ರಾಯ ಮಾಡಿ ಉಸ್ತಾದರಿಗೆ ಹೊಸ ಕಾರು ಖರೀದಿಸಿ ಕೊಡುವ ಎಂಬ ಒಮ್ಮತದ ತೀರ್ಮಾನಕ್ಕೆ ಬಂದರು. ನಾಲ್ವರು ಯುವಕರು ಸೇರಿ ಸುಮಾರು 7 ಲಕ್ಷ ರೂ ಮೌಲ್ಯದ ವ್ಯಾಗನರ್ ಕಾರು ಖರೀದಿಸಿ ಉಸ್ತಾದರಿಗೆ ಹಸ್ತಾಂತರಿಸಿದ್ದಾರೆ. ಕಾರು ಸ್ವೀಕರಿಸಿದ ಉಸ್ತಾದ್ ಬಿ.ಎಂ ಮುಹಮ್ಮದ್ ದಾರಿಮಿ ಸಂತಸ ವ್ಯಕ್ತಪಡಿಸಿದ್ದಾರೆ.
ತಮ್ಮ ಜಮಾಅತ್‌ನಲ್ಲಿ ಸೇವೆ ಸಲ್ಲಿಸುವ ಉಸ್ತಾದರ ಪ್ರಯಾಣದ ಅನಾನುಕೂಲತೆ ಅರಿತು ಹೊಸ ಕಾರು ಖರೀಸಿದಿ ಕೊಟ್ಟು ಮಾದರಿ ಕಾರ್ಯ ಮಾಡಿದ ನಾಲ್ವರು ಯುವಕರ ಕಾರ್ಯಕ್ಕೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ. ಪುನ ಚಮಸೀದಿಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ದಾರಿಮಿ ಎಲ್ಲರ ಪ್ರೀತಿ ಸಂಪಾದಿಸಿದ್ದು ಅವರಿಗೆ ಈಗ ಊರಿನ ನಾಲ್ಕು ಯುವಕರು ಸೇರಿಕೊಂಡು ಕಾರು ನೀಡಿರುವುದು ಮಾದರಿ ಕಾರ್ಯವಾಗಿದೆ ಎಂದು ಪುಣಚ ಮಸೀದಿಯ ಉಪಾಧ್ಯಕ್ಷ ಯೂಸುಫ್ ಗೌಸಿಯ ಸಾಜ ತಿಳಿಸಿದ್ದಾರೆ