ಉಪ್ಪಿನಂಗಡಿ: ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದೋಚಿದ ಅಪರಿಚಿತರು
ಉಪ್ಪಿನಂಗಡಿ: ಮನೆಗೆ ಬಂದ ಅಪರಿಚಿತ ಇಬ್ಬರು ಕುಡಿಯಲು ನೀರು ಕೇಳಿ ಬಳಿಕ ಮನೆಯಲ್ಲಿದ್ದ ಮಹಿಳೆಯನ್ನು ಕತ್ತಿ ತೋರಿಸಿ ಬೆದರಿಸಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮೇ.11ರಂದು ಬೆಳ್ತಂಗಡಿ ತಾಲ್ಲೂಕು ಕರಾಯ ಗ್ರಾಮದ ಕಲ್ಲೇರಿ ಸಮೀಪ ಬದ್ಯಾರ್ ಎಂಬಲ್ಲಿ ನಡೆದಿದೆ.
ಈ ಬಗ್ಗೆ ಸುಹೈಬಾ ಎಂಬವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಅಂಗಳಕ್ಕೆ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಮಹಿಳೆ ಬಂದಿದ್ದು ಅವರು ಮನೆಯವರಲ್ಲಿ ಮಾತನಾಡಿ ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿ, ಕುಡಿಯಲು ನೀರು ಕೇಳಿದ್ದರು. ನೀರು ತರಲು ತೆರಳಿದಾಗ, ಅಪರಿಚಿತರು ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡ್ರೇಜ್ ಬಾಗಿಲು ತೆರೆದು ಹುಡುಕಾಡುತ್ತಿರುವುದನ್ನು ಕಂಡ ಸುಹೈಬಾ ಬೊಬ್ಬೆ ಹಾಕಿ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ್ದು, ಸದ್ರಿ ವ್ಯಕ್ತಿಗಳು ಸುಹೈಬಾ ಅವರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ, ಹಲ್ಲೆ ನಡೆಸಿ, ಚೂರಿಯನ್ನು ತೋರಿಸಿ ಬೆದರಿಸಿ, ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿದ್ದಾರೆ. ಈ ವೇಳೆ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಅಪರಿಚಿತರು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದು, ಅಪರಿಚಿತರು ದೋಚಿದ ಆಭರಣಗಳ ಮೌಲ್ಯ ಅಂದಾಜು ಮೌಲ್ಯ ರೂ 1,00,000/- ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024 ಕಲಂ:450,394 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.