ಕರಾವಳಿ

ಕಲಿಕೆಗೆ ತೊಂದರೆಯಾದರೆ ನನಗೆ ಕರೆ ಮಾಡು…ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನಿಗೆ ಶಾಸಕ ಅಶೋಕ್ ರೈ ನೆರವಿನ ಭರವಸೆ

ಪುತ್ತೂರು:“ನೀನು ಸ್ಕೂಲ್‌ಗೆ ಹೋಗುವುದಿಲ್ವ? ಏನು  ಕಲಿಯುತ್ತಿದ್ದೀಯ? ಅಪ್ಪ ಅಮ್ಮ ಏನು ಕೆಲಸ ಮಾಡುತ್ತಾರೆ? ನೀನು ಯಾಕೆ ಈ ಕೆಲಸವನ್ನು ಮಾಡುತ್ತಿದ್ದಿಯ ?  ಮನೆಯಲ್ಲಿ ಕಷ್ಟ ಇದೆಯಾ? ಇದು ಉಡುಪಿಯಲ್ಲಿ  ಕಾರ್ಯಕ್ರಮವೊಂದಕ್ಕೆ ತೆರಳಿದ ಪುತ್ತೂರು ಶಾಸಕ ಅಶೋಕ್ ರೈ ಅವರು ಅಲ್ಲಿ ಪಾತ್ರೆಯನ್ನು ಶುಚಿ ಮಾಡುತ್ತಿದ್ದ ಬಾಲಕನಲ್ಲಿ  ಕೇಳಿದ ಪ್ರಶ್ನೆ. 

ಅಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕ ಯಾರೆಂಬುದೇ ಶಾಸಕರಿಗೆ ಗೊತ್ತಿಲ್ಲ. ಊಟ ಮುಗಿಸಿ ಪ್ಲೇಟ್ ಇಡಲು  ಬಂದಾಗ ಬಾಲಕನ ಕೆಲಸವನ್ನು ಕಂಡು ಮರುಕಪಟ್ಟ  ಶಾಸಕರು ಈ ಚಿಕ್ಕ ಪ್ರಾಯದಲ್ಲಿ ಬಾಲಕ ಈ ಕೆಲಸ  ಮಾಡಬೇಕಾದರೆ ಏನೋ ಕಷ್ಟ ಇರಬಹುದು ಎಂದು  ಭಾವಿಸಿ ಅವನ  ಬಳಿ ಬಂದು ಮೊದಲಿಗೆ ತಲೆ ಸವರಿದರು. ಆ ಬಳಿಕ ಆತನಲ್ಲಿ ಅವನ ಮನೆಯವರ ಮಾಹಿತಿ ಪಡೆದುಕೊಂಡರು. ಆಗ ಬಾಲಕ ತಾನು ಪಿಯುಸಿ ಓದುತ್ತಿದ್ದೇನೆ, ಅಪ್ಪ ಸಾರಣೆ  ಕೆಲಸಕ್ಕೆ ಹೋಗುತ್ತಿದ್ದರು, ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ದಿನಂಪ್ರತಿ ಕೆಲಸಕ್ಕೆ ಹೋಗುತ್ತಿಲ್ಲ, ಅಮ್ಮ ಮನೆಯಲ್ಲೇ ಇರುವುದು. ನಾನು ಕ್ಯಾಟರಿಂಗ್ ಅವರ ಜೊತೆ ಕೆಲಸಕ್ಕೆ ಹೋಗುತ್ತೇನೆ ಆ ಹಣವನ್ನು ಕೂಡಿಟ್ಟು ಸ್ಕೂಲ್ ಫೀಸ್ ಕಟ್ಟುವುದಾಗಿ ಹೇಳಿದ. ಬಾಲಕನ ಕಷ್ಟ  ಕೇಳಿ ಭಾವುಕರಾದ ಶಾಸಕರು ನೀನು ವಿದ್ಯೆ  ಮುಂದುವರೆಸು ನಿನಗೆ ವಿದ್ಯಾಬ್ಯಾಸಕ್ಕೆ ಏನಾದರೂ ಕಷ್ಟವಾದರೆ ನನಗೆ ಕರೆ ಮಡು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಬಾಲಕನ ಜೊತೆ ಶಾಸಕರು  ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ಮಾನವೀಯತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!