ಒಂಟಿ ರನ್ ಓಡದ ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಡೆ ಟೀಕೆಗೆ ಗುರಿಯಾಗಿದೆ. ಚೆನ್ನೈ ಇನ್ನಿಂಗ್ಸ್ ನ ಕೊನೆಯಲ್ಲಿ ಧೋನಿ ಬೌಂಡರಿ ಲೈನ್ ಗೆ ಚೆಂಡನ್ನು ಹೊಡೆದರೂ ರನ್ ಓಡಿರಲಿಲ್ಲ. ನಾನ್ ಸ್ಟ್ರೈಕ್ ನಲ್ಲಿದ್ದ ಡ್ಯಾರೆಲ್ ಮಿಚೆಲ್ ಅವರು ರನ್ ಗಾಗಿ ಓಡಿದರೂ ಧೋನಿ ಓಡದ ಕಾರಣ ಮಿಚೆಲ್ ವಾಪಸ್ ನಾನ್ ಸ್ಟ್ರೈಕ್ ನತ್ತ ಓಡಬೇಕಾಯಿತು. ಧೋನಿಯ ಈ ನಡೆಗೆ ಭಾರತ ತಂಡದ ಮಾಜಿ ಅಲ್ ರೌಂಡರ್ ಇರ್ಫಾನ್ ಪಠಾಣ್ ಸೇರಿ ಹಲವರು ಟೀಕೆ ಮಾಡಿದ್ದಾರೆ.

ಪಿಚ್‌ನ ಇನ್ನೊಂದು ತುದಿಯಲ್ಲಿ ನ್ಯೂಜಿಲೆಂಡ್ ಹಾರ್ಡ್ ಹಿಟ್ಟರ್ ಡ್ಯಾರಿಲ್ ಮಿಚೆಲ್ ಅವರಿದ್ದರೂ ಧೋನಿ ಸಿಂಗಲ್ ಅಥವಾ ಡಬಲ್ ರನ್ ಮಾಡಲು ನಿರಾಕರಿಸಿದರು. ಧೋನಿ ಹೊಡೆದೊಡನೆ ಸುಲಭವಾದ ಸಿಂಗಲ್ ಎಂದು ಅರಿತುಕೊಂಡ ಮಿಚೆಲ್ ನಾನ್-ಸ್ಟ್ರೈಕರ್‌ನ ತುದಿಯಿಂದ ಓಡಿದರು, ಅವರು ಸ್ಟ್ರೈಕ್ ಗೆ ಬಂದಾಗ ಕ್ರೀಸ್ ಬಿಟ್ಟಿರದ ಧೋನಿ ಮಿಚೆಲ್ ರನ್ನು ಹಿಂದೆ ಕಳುಹಿಸಿದರು. ಮಿಚೆಲ್ ಮತ್ತೆ ಹಿಂದೆ ಓಡಿ ನಾನ್ ಸ್ಟ್ರೈಕ್ ಗೆ ತಲುಪಿದರು.
ತಾನು ಕ್ರೀಸ್ ನಲ್ಲಿ ಇರಬೇಕೆಂದು ಮಿಚೆಲ್ ರನ್ನು ಹಿಂದಕ್ಕೆ ಕಳುಹಿಸಿದ ಧೋನಿ, ಒಂದು ವೇಳೆ ಆಡಿದ್ದರೆ ಸುಲಭವಾಗಿ ಎರಡು ರನ್ ಕದಿಯಬಹುದಿತ್ತು. ಮಿಚೆಲ್ ಎರಡು ರನ್ ಗೆ ಓಡಿದರೂ ಅಂಕಪಟ್ಟಿಗೆ ಅದು ದಾಖಲಾಗಲಿಲ್ಲ.
ಮಿಚೆಲ್ ಅವರು ಪೂರ್ಣ ಪ್ರಮಾಣದ ಬ್ಯಾಟರ್ ಆಗಿದ್ದರೂ ಕೂಡಾ ಧೋನಿಯ ಈ ನಡೆ ಹಲವರಿಗೆ ಅಚ್ಚರಿ ಮೂಡಿಸಿದೆ.
ಈ ವಿಚಾರವನ್ನು ಇರ್ಫಾನ್ ಪಠಾಣ್ ಅವರು ಆಗಲೇ ಖಂಡಿಸಿದರು. “ಅವರು ಹಾಗೆ ಮಾಡಬಾರದಿತ್ತು ಇದು ಟೀಮ್ ಗೇಮ್. ಟೀಮ್ ಗೇಮ್ ನಲ್ಲಿ ಹಾಗೆ ಮಾಡಬೇಡಿ. ಇನ್ನೊಬ್ಬ ವ್ಯಕ್ತಿ (ಡ್ಯಾರೆಲ್ ಮಿಚೆಲ್) ಕೂಡ ಅಂತಾರಾಷ್ಟ್ರೀಯ ಆಟಗಾರ. ಅವನು ಬೌಲರ್ ಆಗಿದ್ದರೆ, ನನಗೆ ಅರ್ಥವಾಗುತ್ತಿತ್ತು. ನೀವು ಇದೇ ರೀತಿ ನೀವು ರವೀಂದ್ರ ಜಡೇಜಾ ಜೊತೆಗೆ ಮಾಡಿದ್ದೀರಿ. ಅಗತ್ಯವಿರಲ್ಲ. ಅದನ್ನು ತಪ್ಪಿಸಬಹುದಿತ್ತು” ಎಂದು ಪಠಾಣ್ ಹೇಳಿದರು.