ಪುತ್ತೂರು ವಿಧಾನಸಭಾ ಕ್ಷೇತ್ರ 250 ಕಾಮಗಾರಿ ಗುದ್ದಲಿಪೂಜೆ ಬಾಕಿ: ಹಗಲು ರಾತ್ರಿ ಶಿಲಾನ್ಯಾಸ ಮಾಡಬೇಕಾದ ಪರಿಸ್ಥಿತಿ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 250 ಕಾಮಗಾರಿಗಳ ಗುದ್ದಲಿಪೂಜೆ ನಡೆಸಲು ಬಾಕಿ ಇದ್ದು ಸಮಯದ ಅಭಾವದಿಂದ ಹಗಲು ರಾತ್ರಿ ಶಿಲಾನ್ಯಾಸ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದ್ದು ಮುಂದಿನ 15 ದಿನದೊಳಗೆ ಎಲ್ಲಾ ಕಾಮಗಾರಿಗಳಿಗೂ ಶಿಲಾನ್ಯಾಸ ಮಾಡಬೇಕಾಗಿದ್ದು , ಶಿಲಾನ್ಯಾಸ ಮಾಡದೇ ಇದ್ದಲ್ಲಿ ಅನುದಾನವೂ ಕಡಿತವಾಗುವ ಆತಂಕವಿದೆ ಎಂದು ಹೇಳಿದರು.
ಈಗಾಗಲೇ ಪುಣಚ, ಆರ್ಯಾಪು, ಕೆದಂಬಾಡಿ, ಕೆಯ್ಯೂರು, ಅರಿಯಡ್ಕ, ನರಿಮೊಗ್ರು, ಮುಂಡೂರು, ಕೋಡಿಂಬಡಿ, ಉಪ್ಪಿನಂಗಡಿ, ಹಿರೆಬಂಡಾಡಿ, ಬಡಜತ್ತೂರು, ಪಾಣಾಜೆ, ಬೆಟ್ಟಂಪಾಡಿ, ನೆಟ್ಟನಿಗೆ ಮುಡ್ನೂರು, ವಿಟ್ಲ, ಕಬಕ, ಕೊಡಿಪ್ಪಾಡಿ, ಪುತ್ತೂರು ನಗರ, ಚಿಕ್ಕಮುಡ್ನೂರು, ಬಡನ್ನೂರು, ಮಾಡ್ನೂರು, ಕೊಳ್ತಿಗೆ, ಕೆಮ್ಮಿಂಜೆ, ಪೆರ್ನೆ, ಕೆದಿಲ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಎರಡು ಹಂತದ ಗುದ್ದಲಿಪೂಜೆ ಕಾರ್ಯಕ್ರಮವನ್ನು ನಡೆಸಲಾಗಿದ್ದು ಗ್ರಾಮಸ್ಥರ ಬೇಡಿಕೆ ಇರುವ ರಸ್ತೆಗಳಿಗೆ ಹೆಚ್ಚಿನ ಗುದ್ದಲಿಪೂಜೆ ನಡೆಸಲಾಗಿದೆ ಮತ್ತು ಅನುದಾನವನ್ನು ತರಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ರಾತ್ರಿ ೧೦ ರ ಬಳಿಕವೂ ಶಿಲಾನ್ಯಾಸ…!
ರಾತ್ರಿ ಹತ್ತು ಗಂಟೆಯ ಬಳಿಕವೂ ಗ್ರಾಮಗಳಲ್ಲಿ ರಸ್ತೆ ಶಿಲಾನ್ಯಾಸ ನಡೆಯುತ್ತಿದೆ. ಹಗಲು ಹೊತ್ತಿನಲ್ಲಿ ವಿವಿಧ ಕಾರ್ಯಕ್ರಮಗಳ ಒತ್ತಡವಿರುವ ಕಾರಣ ರಾತ್ರಿವೇಳೆ ಶಿಲಾನ್ಯಾಸ ನಡೆಸಬೇಕಾದ ಪರಿಸ್ಥಿತಿ ಇದೆ. ಒಂದೆಡೆ ಸಾರ್ವಜನಿಕರ ಭೇಟಿ ಇನ್ನೊಂದೆಡೆ ಕಾರ್ಯಕ್ರಮಗಳ ಒತ್ತಡವೂ ಇದೆ. ಅಭಿವೃದ್ದಿ ಕಾಮಗಾರಿಗಳಿಗೂ ಒತ್ತು ನೀಡಬೇಕಾದ ಕಾರಣ ರಾತ್ರಿ ಹಗಲು ಎನ್ನದೆ ಕ್ಷೇತ್ರದಲ್ಲಿ ಶಿಲಾನ್ಯಾಸಗಳು ನಡೆಯುತ್ತಿದೆ.
250 ಬಾಕಿ ಇದೆ: ಕ್ಷೇತ್ರದಲ್ಲಿ 250 ಕಾಮಗಾರಿಗೆ ಗುದ್ದಲಿಪೂಜೆ ಶಿಲಾನ್ಯಾಸ ಬಾಕಿ ಇದೆ. ಅನುದಾನ ಬಿಡುಗಡೆಯಾದ ಬಳಿಕ ಮಾತ್ರ ನಾವು ಗುದ್ದಲಿಪೂಜೆ ಮಾಡುತ್ತೇವೆ. ಭರವಸೆ ಕೊಟ್ಟು ಗುದ್ದಲಿಪೂಜೆಯಾಗಲಿ, ತೆಂಗಿನ ಕಾಯಿ ಒಡೆದು ಬರುವುದಿಲ್ಲ. ಗ್ರಾಮಗಳಲ್ಲಿ ಎಲ್ಲೆಲ್ಲಿ ಅಗತ್ಯ ಕಾಮಗಾರಿಗಳಿದೆಯೋ ಅಲ್ಲಿಗೆಲ್ಲಾ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡದೆ ರಾಜಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಗ್ರಾಮಸ್ಥರ ಬೇಡಿಕೆ ಮತ್ತು ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ಎರಡು ವಾರದಲ್ಲಿ ಎಲ್ಲಾ ಕಾಮಗಾರಿಗಳಿಗೂ ಗುದ್ದಲಿಪೂಜೆ ಪೂರ್ಣಗೊಳ್ಳಲಿದ್ದು ಬಳಿಕ ಮೂರನೇ ಹಂತದ ಶಿಲಾನ್ಯಾಸ ಆರಂಭವಾಗಲಿದ್ದು ಕ್ಷೆತ್ರಕ್ಕೆ ಹಣದ ಹೊಳೆಯೇ ಹರಿದು ಬರುತ್ತಿದ್ದು ಕ್ಷೆತ್ರವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಮಾಡಲು ಸಿದ್ದ. ಅಭಿವೃದ್ದಿಯ ಜೊತೆಗೆ ಜನರ ಸಂಕಷ್ಟವನ್ನು ಆಲಿಸಬೇಕಿದೆ ಎಂದು ಶಾಸಕರು ತಿಳಿಸಿದರು.