ಅಡಿಕೆ ಎಲೆ ಚುಕ್ಕಿ ರೋಗವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ:ಚಲುವರಾಯಸ್ವಾಮಿ
ಬೆಳಗಾವಿ: ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಲೆನಾಡು, ಕರಾವಳಿ ಹಾಗೂ ಮಧ್ಯ ಕರ್ನಾಟಕ ಭಾಗದ ಕೆಲವು ಕಡೆ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ರೋಗದ ಬಗ್ಗೆ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರುದ್ರೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು ಅಡಿಕೆ ಎಲೆ ಚುಕ್ಕಿ ರೋಗದಿಂದ ತೊಂದರೆಗೆ ಒಳಗಾದ ರೈತರಿಗೆ ಈಗಾಗಲೇ ಸರಕಾರದಿಂದ ಪರಿಹಾರ ಕೊಡಲಾಗಿದೆ. ಇದರಿಂದ ಸಾಕಷ್ಟು ಹಾನಿಯಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದ್ದು, ಇದನ್ನು ತೊಡೆದುಹಾಕಲು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ರೋಗವನ್ನು ತಡೆಗಟ್ಟಲು ಸಂಶೋಧನೆ ನಡೆಸಲು ಸರಕಾರ ಮುಂದಾಗಿದ್ದು, ಈ ಸಂಬಂಧ ಸಂಶೋಧನೆಗೆ ಹಣ ಕೂಡ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.