ರೈ ಚಾರಿಟೇಬಲ್ ಟ್ರಸ್ಟ್ ವಸ್ತ್ರ ವಿತರಣೆ, ಸಹಭೋಜನಾ ಕಾರ್ಯಕ್ರಮ: 37 ಗ್ರಾಮಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಆಮಂತ್ರಣ: ಸುಮಾ ಅಶೋಕ್ ರೈ
ಪುತ್ತೂರು: ನ.,13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯಲಿರುವ 11 ನೇ ವರ್ಷದ ವಸ್ತ್ರದಾನ ಹಾಗೂ ಸಹಭೋಜನ ಕಾರ್ಯಕ್ರಮಕ್ಕೆ ಒಟ್ಟು 37 ಗ್ರಾಮಗಳಲ್ಲಿ 50 ಸಾವಿರಕ್ಕೂ ಮಿಕ್ಕಿ ಮಂದಿಯನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ ಎಂದು ಟ್ರಸ್ಟಿನ ಮುಖ್ಯಸ್ಥೆ ಸುಮಾ ಅಶೋಕ್ ರೈ ತಿಳಿಸಿದರು.
ಬನ್ನೂರು, ಚಿಕ್ಕಮುಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಉಪ್ಪಿನಂಗಡಿ, ಬಜತ್ತೂರು, ವಿಟ್ಲಮುಡ್ನೂರು, ಮಾನಿಲ, ಅಳಿಕೆ, ಪೆರುವಾಯಿ, ಪುಣಚ, ಕೇಪು, ವಿಟ್ಲ, ಕುಳ, ಕೊಡಿಪ್ಪಾಡಿ, ಕಬಕ, ಪುತ್ತೂರು ನಗರ, ಕೆಮ್ಮಿಂಜೆ, ಮುಂಡೂರು, ಶಾಂತಿಗೋಡು, ನರಿಮೊಗರು, ಕೆದಂಬಾಡಿ, ಕೆಯ್ಯೂರು, ಕೊಳ್ತಿಗೆ, ಮಾಡ್ನೂರು, ಕುರಿಯ, ಬಡಗನ್ನೂರು, ಪಡುವನ್ನೂರು, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ, ನೆಟ್ಟಣಿಗೆಮುಡ್ನೂರು, ಆರ್ಯಾಪು ಮತ್ತು ಒಳಮೊಗ್ರು ಗ್ರಾಮಗಳ ವಿವಿಧ ಕಡೆಗಳಲ್ಲಿ ಸಭೆಗಳನ್ನು ನಡೆಸಿ ಜನರನ್ನು ಆಹ್ವಾನಿಸಲಾಗಿದೆ. ಇದಲ್ಲದೆ ತಾಲೂಕಿನ ವಿವಿಧ ಜನತಾ ಕಾಲೊನಿಗಳು, ಪರಿಶಿಷ್ಟ ಜಾತಿ, ಪಂಗಡದ ಕಾಲನಿಗಳು ಸೇರಿದಂತೆ ಎಲ್ಲಾ ಕಾಲನಿಗಳಲ್ಲಿಯೂ ಸಭೆ ನಡೆಸಿ ಆಮಂತ್ರಣ ಪತ್ರವನ್ನು ನೀಡಲಾಗಿದೆ. ಎಲ್ಲಾ ಸಭೆಗಳಲ್ಲಿಯೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಸುಮಾ ಅಶೋಕ್ ರೈ ಹೇಳಿದರು.
ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ: ನಾವು ಕಳೆದ ಹತ್ತು ದಿನಗಳಿಂದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸಿ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ರಾಜಕೀಯ ರಹಿತವಾಗಿ ಕಳೆದ 10 ವರ್ಷಗಳಿಂದ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಟ್ರಸ್ಟ್‌ನ ಸದಸ್ಯರಿಗೆ ಅಂಚೆ ಮೂಲಕ ಆಮಂತ್ರಣ ಪತ್ರ ಕಳುಹಿಸಿದ್ದೇವೆ. ಗ್ರಾಮೀಣ ಭಾಗಗಳಲ್ಲಿ ನಮಗೆ ಸಂಪೂರ್ಣ ಬೆಂಬಲ ದೊರಕಿದೆ. ಶಾಸಕ ಅಶೋಕ್ ರೈಯವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ನಮ್ಮಲ್ಲಿ ಉತ್ತಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮನ್ನು ಆಶೀರ್ವಸಿಸಬೇಕು ಎಂದು ಸುಮಾ ಅಶೋಕ್ ರೈ ವಿನಂತಿಸಿದ್ದಾರೆ.