ಸಲಿಂಗ ವಿವಾಹಕ್ಕಿಲ್ಲ ಕಾನೂನಿನ ಮಾನ್ಯತೆ
ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ 21 ಅರ್ಜಿಗಳನ್ನು ಸಾಂವಿಧಾನಿಕ ಪೀಠ ವಜಾಗೊಳಿಸಿದೆ. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ, ಪಿ.ಎಸ್.ನರಸಿಂಹ ಅವರಿದ್ದ ಪೀಠಕ್ಕೆ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ಕುರಿತು 10 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠವು, ಮೇ 11ರಂದು ತೀರ್ಪು ಕಾಯ್ದಿರಿಸಿತ್ತು. ಈ ಕುರಿತಂತೆ ಅ. 17ರಂದು ತೀರ್ಪು ಪ್ರಕಟಿಸಿತು.
ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ನ್ಯಾಯಾಲಯವು ಕಾನೂನುಗಳನ್ನು ಮಾಡುವುದಿಲ್ಲ. ಬದಲಿಗೆ ಅವುಗಳನ್ನು ವ್ಯಾಖ್ಯಾನಿಸುತ್ತದೆ. ಕೇವಲ ಸಂಸತ್ತು ಮಾತ್ರ ವಿಶೇಷ ವಿವಾಹ ಕಾಯ್ದೆಯಲ್ಲಿ ಬದಲಾವಣೆ ತರಬಹುದು. ಆದರೆ ಈ ಅಸಹಜ ಸಮುದಾಯ ತಮ್ಮ ಬದುಕು ಸಾಗಿಸುವಲ್ಲಿ ಯಾವುದೇ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳದ್ದು’ ಎಂದು ಸೂಚಿಸಿದರು.
‘ವಿಶೇಷ ವಿವಾಹ ಕಾಯ್ದೆ ವಿಷಯವನ್ನು ಸಂಸತ್ತು ನಿರ್ಧರಿಸಬೇಕು. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 ಅನ್ನು ರದ್ದುಪಡಿಸಿದರೆ ಪ್ರಗತಿಪರ ಶಾಸನದ ಪ್ರಯೋಜನಗಳನ್ನು ಕಳೆದುಕೊಳ್ಳಬೇಕಾಗುವ ಅಪಾಯವೂ ಇದೆ. ಇದು ದೇಶವನ್ನು ಸ್ವಾತಂತ್ರ್ಯ ಪೂರ್ವ ಯುಗಕ್ಕೆ ಕೊಂಡೊಯ್ಯಲಿದೆ. ಭಾರತೀಯ ಉತ್ತರಾಧಿಕಾರ ಕಾಯ್ದೆ ಅಥವಾ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಒಮ್ಮೆ ಗಮನಿಸಿದರೆ ಈ ಪ್ರಕರಣವು ಶಾಸಕಾಂಗ ಕ್ಷೇತ್ರ ವ್ಯಾಪ್ತಿಗೆ ಸೇರುತ್ತದೆ ಎಂದಿದ್ದಾರೆ.