ಕರಾವಳಿರಾಜಕೀಯ

ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ



ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಸೆ 26 ರಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಸುಳ್ಯ ವಿಧಾನಸಭಾ ಚುನಾವಣೆಯ ಬಳಿಕ ಸುಳ್ಯದ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿದ್ದ ಗೊಂದಲಗಳನ್ನು ಸರಿಪಡಿಸಲು ಸುಳ್ಯ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯ ಆರಂಭದಲ್ಲಿಯೇ ಕಾರ್ಯಕರ್ತರುಗಳನ್ನು ಉದ್ದೇಶಿಸಿ ಮಾತನಾಡಿದ ಮಮತಾ ಗಟ್ಟಿಯವರು ಸುಳ್ಯದ ಈ ಸಭೆಯಲ್ಲಿ ಸೇರಿದ ಕಾರ್ಯಕರ್ತರನ್ನು ನೋಡಿದಾಗ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಬಲವಾಗಿದೆ ಎಂಬುದನ್ನು ತೋರಿಸಿಕೊಡುತ್ತಿದ್ದೆ. ಬೆಳಿಗ್ಗೆ ನಾನು ಈ ಸಭೆಗೆ ಬರುವ ಮುನ್ನವೇ ದೇವರಲ್ಲಿ ಪ್ರಾರ್ಥಿಸಿದ್ದೆ.ಇಂದಿನ ಸಭೆಯಲ್ಲಿ ಪಕ್ಷ ಸಂಘಟನೆಗೆ ಪೂರಕವಾದ ವಾತಾವರಣ ಲಭಿಸಬೇಕೆಂದು ದೇವರಲ್ಲಿ ಕೇಳಿದ್ದೆ ಅದು ಇಲ್ಲಿ ಬಂದಾಗ ಸತ್ಯವಾಗಿದೆ ಎಂದು ಹೇಳಿದರು.ಪಕ್ಷ ಸಂಘಟನೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಮುಂದಿನ ದಿನಗಳಲ್ಲಿ ಬರುವಂತಹ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್, ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ನಾವು ಶಕ್ತಿಮೀರಿ ಶ್ರಮಿಸೋಣ ಎಂದು ಹೇಳಿದರು.ಕಾಂಗ್ರೆಸ್ ಸರಕಾರ ನೀಡಿರುವಂತಹ ಐದು ಗ್ಯಾರೆಂಟಿ ಯೋಜನೆಗಳನ್ನು ಫಲಾನುಭವಿಗಳ ಮನೆ ಮನೆಗೆ ತಲುಪಿಸುವ ಕಾರ್ಯಗಳನ್ನು ಕಾರ್ಯಕರ್ತರುಗಳು ಒಗ್ಗಟ್ಟಿನಿಂದ ಮಾಡಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.

ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರುಗಳಿಗೆ ಸಲಹೆ ಸೂಚನೆ ನೀಡುವ ಸಮಯಗಳನ್ನು ನೀಡಲಾಯಿತು. ಈ ವೇಳೆ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಉಚ್ಚಾಟಿತ ನಾಯಕರುಗಳು ಒಬ್ಬೊಬ್ಬರಾಗಿ ಎದ್ದು ನಿಂತು ತಮಗಾದ ನೋವನ್ನು ಮತ್ತು ಪಕ್ಷಕ್ಕಾಗಿ ನಿಷ್ಠಾವಂತರಾಗಿ ದುಡಿದ ನಮ್ಮ ಮೇಲೆ ಶಿಸ್ತು ಕ್ರಮ ಯಾಕೆ ಎಂದು ಉಸ್ತುವಾರಿಗಳ ಮುಂದೆ ತಮ್ಮ ಅಹವಾಲುಗಳನ್ನು ಮಂಡಿಸಲು ಪ್ರಾರಂಭಿಸಿದರು.

ಪ್ರಥಮವಾಗಿ ಮಾತನಾಡಲು ಎದ್ದುನಿಂತ ನ.ಪಂ.ಮಾಜಿ ಸದಸ್ಯ ಕೆ.ಗೋಕುಲ್ ದಾಸ್ ‘ ನಾನು ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಉತ್ತಮವಾಗಿ ನಿಭಾಯಿಸಿದ್ದೇನೆ. ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ಸುಳ್ಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಮಾಡಿರುವ ತಪ್ಪಿನಿಂದ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿದ ನನ್ನನ್ನು ಪಕ್ಷದಿಂದ ಉಚ್ಚಾಟಿಸುವ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ನನ್ನನ್ನು ಸೇರಿ 17 ಮಂದಿಯನ್ನು ಪಕ್ಷ ಅಮಾನತು ಮಾಡಿದ್ದು ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಸರಕಾರ ತಂದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವಲ್ಲಿ ಕೆಲಸ ಮಾಡಿದ್ದು ನಾವು. ಹೀಗಿರುವಾಗ ನಮ್ಮ ಮೇಲೆ ಶಿಸ್ತು ಕ್ರಮ ಮಾಡಿದ್ದು ನಮಗೆ ನೋವಾಗಿದೆ.
ಪ್ರತಿಯೊಬ್ಬ ಕಾರ್ಯಕರ್ತರುಗಳು ಪಕ್ಷದ ನಾಯಕರುಗಳು ತಪ್ಪು ಮಾಡುವಾಗ ಅದನ್ನು ಪ್ರಶ್ನಿಸುವ ಶಕ್ತಿ ಹೊಂದಿರಬೇಕು. ಸುಳ್ಯದ ಕಾರ್ಯಕರ್ತರು ಯಾವಾಗ ನಾಯಕರುಗಳನ್ನು ಪ್ರಶ್ನಿಸುತ್ತಾರೋ ಅಂದು ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯ ಎಂದು ಹೇಳಿದರು. ನಾಯಕರು ನೋಟಿನ ಹಿಂದೆ ಹೋಗಿರುವುದರಿಂದ ಸುಳ್ಯದಲ್ಲಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬಂದಿದೆ ಎಂದು ಕುಟುಕಿದರು.

ಹಿರಿಯರಾದ ಬಾಪೂ ಸಾಹೇಬರು ಮಾತನಾಡಿ ಕಾಂಗ್ರೆಸ್ ಪಕ್ಷ ಒಂದು ಮಾದರಿ ಪಕ್ಷವಾಗಿದೆ. ಇದರ ಹಿಂದೆ ಹಲವಾರು ಹಿರಿಯರ ಬಲಿದಾನಗಳು ನಡೆದು ಕಾಂಗ್ರೆಸ್ ಪಕ್ಷ ಬೆಳೆದು ಬಂದಿದೆ. ಇಂದಿನಿಂದಲೂ ಶಾಂತಿಯನ್ನು ಬಯಸುವ ಒಂದು ಪಕ್ಷವೆಂದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಸಭೆ ಮಾಡಿ ಕಾಯರ್ತಕರ್ತರ ಅಭಿಪ್ರಾಯ ಪಡೆದು ಮುಂದೆ ಹೋಗಬೇಕು. ಯಾವುದೇ ಚುನಾವಣೆ ಇರಲಿ ಒಮ್ಮತದ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಬೇಕು” ಎಂದು ಸಲಹೆ ನೀಡಿದರು.

ಮಾಧ್ಯಮ ಸಂಯೋಜಕ ನಂದರಾಜ ಸಂಕೇಶ್ ಅಭಿಪ್ರಾಯ ಮಂಡಿಸಿ ‘ ಸುಳ್ಯದಲ್ಲಿ ಪಕ್ಷ ಕಟ್ಟುವವರನ್ನು,ಕಾರ್ಯಕರ್ತರ ಜೊತೆಯಲ್ಲಿ ಬೆರೆಯುವವರನ್ನು ಬಿಟ್ಟು ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸರಿಯಲ್ಲ. ಚುನಾವಣೆ ಸಂದರ್ಭ ಇಬ್ಬರು ಅಭ್ಯರ್ಥಿಯನ್ನು ಸುಳ್ಳಕ್ಕೆ ಕರೆತಂದು ಅದರಿಂದ ಗೊಂದಲಗಳು ಸೃಷ್ಟಿಯಾಗಲು ಕಾರಣವಾಯಿತು ಎಂದು ಹೇಳಿದರು.ಅವರು ಸುಳ್ಯದಲ್ಲಿ ಎಷ್ಟು ಸಂಘಟನೆ ಮಾಡಿದ್ದಾರೆ.ಸುಳ್ಯದ ಮೂಲಭೂತ ಸಮಸ್ಯೆಗಳ ವಿಚಾರಗಳ ಕುರಿತು ಅವರಿಗೆ ಎಷ್ಟು ಗೊತ್ತಿದೆ ಎಂದು ತಿಳಿದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು. ಚುನಾವಣೆಗೆ ಕಾರ್ಯಕರ್ತರ ಅಭ್ಯರ್ಥಿಯನ್ನು ನಿಲ್ಲಿಸಬೇಕೆ ಹೊರತು ನಾಯಕರ ಅಭ್ಯರ್ಥಿಯನ್ನು ನಿಲ್ಲಿಸಿದ ಪರಿಣಾಮ ಈ ಸ್ಥಿತಿ ಬಂದಿದೆ. ಆದ್ದರಿಂದ ಮುಂಬರುವ ಎಂ.ಪಿ.ಚುನಾವಣೆಗೆ ಒಮ್ಮತದ ಒಬ್ಬರೇ ಅಭ್ಯರ್ಥಿ ಇರಲಿ ಎಂದು ಹೇಳಿದರು.

ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮಾತನಾಡಿ ‘ಸುಳ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿಯುವ ವರ್ಗವೇ ಬೇರೆ,ಬಳಿಕ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅದರಿಂದ ಲಾಭ ಪಡೆಯುವ ವರ್ಗವೇ ಬೇರೆ ಎಂದು ಹೇಳಿದರು.ಈ ವ್ಯವಸ್ಥೆ ಬದಲಾಗಬೇಕು ಹಾಗಿದ್ದಲ್ಲಿ ಮಾತ್ರ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಲು ಸಾಧ್ಯ ಎಂದು ಹೇಳಿದರು.

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಮಾತನಾಡಿ ನಮ್ಮ ಗ್ರಾಮವಾದ ಕಲ್ಮಡ್ಕ ಗ್ರಾಮ ಪಂಚಾಯತಿಯಲ್ಲಿ 9 ಸ್ಥಾನವನ್ನು ಸ್ಥಾನವನ್ನು ಕಾಂಗ್ರೆಸ್ ಗೆದ್ದು ಬಿಜೆಪಿಯ ಅಡ್ರಸ್ ಇಲ್ಲದಂತೆ ಮಾಡಿದವರು ನಾವು.
ಬಿಜೆಪಿ ಭದ್ರಕೋಟೆಯಂತಿದ್ದ ಪಂಜದಲ್ಲಿ ಅಲ್ಪಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತನನ್ನು ನಿಲ್ಲಿಸಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದೇವೆ. ಪಕ್ಷದ ಕಷ್ಟ ಸಂದರ್ಭದಲ್ಲಿಯೂ ಕೂಡ ನಾವು ಎದೆಯೊಡ್ಡಿ ಧೈರ್ಯದಿಂದ ನಿಂತಿದ್ದೇವೆ. ಒಂದು ಸಮಯದಲ್ಲಿ ಜನಾರ್ದನ ಪೂಜಾರಿಯವರ ಮಗನ ಮೇಲೆ ಬೇರೆಯವರು ದಾಳಿ ಮಾಡಲು ಮುಂದಾದಾಗ ನಾನು ಒಬ್ಬನೇ ನಿಂತು ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದೇನೆ ಎಂದು ಹೇಳಿದರು. ಇದು ಯಾವುದನ್ನು ಗೊತ್ತಿಲ್ಲದ ಹೊರಗಿನ ವ್ಯಕ್ತಿಯೊಬ್ಬರು ನಮ್ಮನ್ನು ಉಚ್ಛಾಟನೆಗೆ ಶಿಪಾರಸು ಮಾಡುತ್ತಾರೆಂದಾದರೆ ಇದಕ್ಕಿಂತ ದೊಡ್ಡ ದುರ್ಧೈವ ಕಾಂಗ್ರೆಸ್ ಪಕ್ಷಕ್ಕೆ ಬೇರೊಂದಿಲ್ಲ ಎಂದು ಹೇಳಿದರು.

ಭವಾನಿಶಂಕರ ಕಲ್ಮಡ್ಕ ಮಾತನಾಡಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರವು ನೀಡಿರುವಂತಹ ಐದು ಯೋಜನೆಗಳನ್ನು ಜನರ ಮನೆಗಳಿಗೆ ಮುಟ್ಟಿಸಲು ಎಷ್ಟೊಂದು ಕೆಲಸ ಕಾರ್ಯಗಳು ಮಾಡಿದ್ದೇವೆ ಎಂದು ನೀವೇ ನೋಡಿ ಎಂದು ತಮ್ಮಲ್ಲಿದ್ದ ಮಾಹಿತಿ ಪತ್ರಗಳನ್ನು ಸಭೆಗೆ ತೋರಿಸಿ ನಾವು ಎಲ್ಲ ಹಂತದಲ್ಲಿಯೂ ಪಕ್ಷಕ್ಕಾಗಿ ಸೇವೆ ಸಲ್ಲಿಸಿದವರು.ಆದರೆ ನಮ್ಮನ್ನು ಅಮಾನತು ಮಾಡಲಾಯಿತು. ಈ ವೇಳೆ ಬ್ಲಾಕ್ ಅಧ್ಯಕ್ಷರು ಎಲ್ಲವೂ ಸರಿಯಾಗುತ್ತದೆ ಸುಮ್ಮನಿರಿ ಎಂದು ಹೇಳಿದ್ದರು.ನಾವುಸುಮ್ಮನಿದ್ದ ಕಾರಣ ಈ ಸ್ಥಿತಿ ಆಗಿರುವುದು.ಅಲ್ಲದೆ ಅಕ್ರಮ – ಸಕ್ರಮ ಸಮಿತಿಗೆ ಬಿಜೆಪಿಯವರ ನೇಮಕ ಆಗಿದ್ದು ಯಾರ ತಪ್ಪಿನಿಂದ ಎಂದು ಪ್ರಶ್ನಿಸಿದರು. ಅಧಿಕಾರಿಗಳನ್ನು ಬೊಟ್ಟು ಮಾಡಿ ಯಾವುದೇ ಪ್ರಯೋಜನವಿಲ್ಲ, ಬ್ಲಾಕ್ ಕಾಂಗ್ರೆಸ್ ಜವಾಬ್ದಾರಿಯಿಂದ ಕೆಲಸ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ” ಎಂದು ಹೇಳಿದರು.

ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಮಾತನಾಡಿ ‘ಪಕ್ಷ ವಿರೋಧಿಗಳಿಗೆ ಶಿಸ್ತು ಕ್ರಮ ಆಗಲೇಬೇಕು. ಪಕ್ಷಕ್ಕಾಗಿ ದುಡಿಯುವರ ಮೇಲೆ ಶಿಸ್ತು ಕ್ರಮ ಸರಿಯಲ್ಲ. ಚುನಾವಣೆಯ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಯನ್ನು ಸುಳ್ಯಕ್ಕೆ ಕರೆತದದ್ದು ಸರಿಯಲ್ಲ. ಮೊದಲು ಈ ರೀತಿಯ ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಸ್ತುತ ನಮ್ಮ ಕ್ಷೇತ್ರದಿಂದ ಪಕ್ಷದಿಂದಲೇ ನನ್ನನ್ನು ಹೊರಗೆ ಹಾಕಲು ಪ್ರಯತ್ನಪಡುವವರು ಇದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾದರೆ ನಾನು ಕಾರಣನಲ್ಲ. ಶಿಸ್ತು ಕ್ರಮಕ್ಕೆ ಒಳಗಾದವರಿಗೆ ಬೆಂಬಲ ನೀಡುವ ನಾಯಕರು ನಮ್ಮಲ್ಲಿದ್ದಾರೆ. ಅವರನ್ನು ಪಕ್ಷದ ಕಾರ್ಯಕ್ರಮಗಳ ವೇದಿಕೆಯಲ್ಲಿ ಮಾತನಾಡಿಸಿ ಪ್ರೋತ್ಸಾಹ ಮಾಡುವಂತಹ ಕೆಲಸ ಕಾರ್ಯಗಳು ನಡೆಯುತ್ತಿದೆ. ಪಕ್ಷ ವಿರುದ್ಧ ಕೆಲಸ ಮಾಡುವ ನಾಯಕರು ಇಲ್ಲಿ ವೇದಿಕೆಯ ಮೇಲೆ ಇದ್ದಾರೆ, ಕೆಳಗೂ ಇದ್ದಾರೆ. ಇದನ್ನು ಪಕ್ಷ ಗಮನಿಸಬೇಕು” ಎಂದು ಹೇಳಿದರು.

ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿದ ನನಗೆ ನನಗೂ ಶೋಕಾಸ್ ನೋಟೀಸ್ ಬಂದಿತ್ತು.ನಾನು ಕಾಂಗ್ರೆಸ್ ವಿರುದ್ಧ ಏನು ಮಾಡಿದ್ದೇನೆ? ಎಂದು ಪ್ರಶ್ನಿಸಿದರು. ಚುನಾವಣೆಗೆ ಟಿಕೆಟ್ ಘೋಷಣೆ ಮಾಡುವ ಮೊದಲು ನಾವು ಯಾರನ್ನೇ ಹೇಳಿರಬಹುದು. ಆದರೆ ಪಕ್ಷ ಅಭ್ಯರ್ಥಿಯನ್ನು ಅಧಿಕೃತಗೊಳಿಸಿದ ಬಳಿಕ ಅವರ ಗೆಲುವಿಗಾಗಿ ದುಡಿದಿದ್ದೇನೆ ಎಂದು ಹೇಳಿದರು. ಅಭ್ಯರ್ಥಿಗಳ ವಿಷಯದಲ್ಲಿ ಗೊಂದಲ ಬಂದಾಗ ನಾನು ಕೃಷ್ಣಪ್ಪರೊಂದಿಗೆ ನಂದಕುಮಾರ್ ರವರ ಬಳಿ ಮಾತನಾಡಲು ಹೇಳಿದ್ದೇನೆ. ಅದೇ ರೀತಿ ನಂದಕುಮಾರ್ ರವರ ಬಳಿಯೂ ಕೂಡ ಕೃಷ್ಣಪ್ಪರವರೊಂದಿಗೆ ಮಾತನಾಡಲು ಸೂಚಿಸಿದ್ದೇನೆ.ಆದರೆ ಆ ಸಂದರ್ಭದಲ್ಲಿ ಅವರಿಬ್ಬರು ಮಾತನಾಡಿಕೊಳ್ಳಲಿಲ್ಲ ಅದಕ್ಕೆ ನಾನು ತಪ್ಪುಗಾರನ ಎಂದು ಕೇಳಿದರು.

ಬಳಿಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮಾತನಾಡಿ ಇಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಪಕ್ಷಕ್ಕಾಗಿ ಇದೇ ಒಗ್ಗಟ್ಟು ಇಟ್ಟುಕೊಂಡು ಮುಂದೆ ಸಾಗೋಣ” ಎಂದು ಹೇಳಿದರು.

ಡಿಸಿಸಿ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ ಮಾತನಾಡಿ “ಕಾಂಗ್ರೆಸ್‌ನಲ್ಲಿ ನಾನು ಎಂಬ ಪದ ಯಾರೂ ಬಳಸುವುದು ಬೇಡ.ನಾವು ಎಂಬ ಪದವನ್ನು ಇಟ್ಟಾಗ ಪಕ್ಷ ಒಗ್ಗಟ್ಟಾಗಿ ಸಾಗಲು ಸಾಧ್ಯ.ಎಲ್ಲ ನಾಯಕರು ಕೂಡಾ ದೊಡ್ಡ ಮನಸ್ಸು ಮಾಡಿ ಜತೆಯಾಗಿ ಸಾಗೋಣ. ಉಸ್ತುವಾರಿಗಳಾಗಿರುವ ಮಮತಾ ಗಟ್ಟಿಯವರ ನೇತೃತ್ವದಲ್ಲಿ ಸುಳ್ಯ ಬ್ಲಾಕ್ ಗಟ್ಟಿಯಾಗಿ ಬೆಳೆಯಲಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರು, ಪಕ್ಷದಲ್ಲಿದ್ದ ಸಣ್ಣ ಪುಟ್ಟ ಗೊಂದಲಗಳು ಇಂದು ನಿವಾರಣೆಯಾಗಿದೆ.ಎಲ್ಲರೂ ಒಟ್ಟಾಗಿ ಸಾಗೋಣ.ಮುಂಬರುವ ಚುನಾವಣೆಯ ನಿಟ್ಟಿನಲ್ಲಿ ಪಕ್ಷ ಸಂಘಟಿಸೋಣ” ಎಂದು ಹೇಳಿದರು.

ಲಕ್ಷ್ಮೀಶ್ ಗಬಲಡ್ಕ, ಲಕ್ಷ್ಮಣ ಬೊಳ್ಳಾಜೆ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಉಮೇಶ್ ಬೂಡು, ಬಾಲಕೃಷ್ಣ ಭಟ್ ಕೊಡೆಂಕಿರಿ, ಜಂಶೀರ್ ಶಾಲೆಕ್ಕಾರ್, ಸುಜಯಕೃಷ್ಣ, ಬಶೀರ್ ಅಹ್ಮದ್ ನೇಲ್ಯಮಜಲು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ, ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ,ಟಿ.ಎಂ.ಶಹೀದ್, ಪ್ರಮುಖರಾದ ಗೀತಾ ಕೋಲ್ಚಾರ್, ರಾಜೀವಿ ಆರ್ ರೈ,ಕಳಂಜ ವಿಶ್ವನಾಥ ರೈ, ಜಯಪ್ರಕಾಶ್ ನೆಕ್ರೆಪ್ಪಾಡಿ,ಶಾಫಿ ಕುತ್ತಮೊಟ್ಟೆ,ಇಸ್ಮಾಯಿಲ್ ನೇಲ್ಯಮಜಲು, ಸುರೇಶ್ ಅಮೈ, ಸದಾನಂದ ಮಾವಜಿ, ಸುಭಾಶ್ಚಂದ್ರ ರೈ ಬಂಟ್ವಾಳ, ಹಮೀದ್ ಕುತ್ತಮೊಟ್ಟೆ ಮೊದಲಾದವರಿದ್ದರು.

ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ವಂದಿಸಿದರು. ದಿನೇಶ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!