ಸುಳ್ಯ :ವರ್ಗಾವಣೆಗೊಂಡ ಪೋಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಯವರಿಗೆ ಬೀಳ್ಕೊಡುಗೆ, ನೂತನ ವೃತ್ತ ನಿರೀಕ್ಷಕರಾಗಿ ಆಗಮಿಸಿದ ಮೋಹನ್ ಕೊಠಾರಿ ಯವರಿಗೆ ಸ್ವಾಗತ ಸಮಾರಂಭ
ಸುಳ್ಯ: ಪೋಲೀಸ್ ವೃತ್ತಿಯಲ್ಲಿ ಪ್ರತಿಯೊಬ್ಬ ಪೊಲೀಸರಿಗೂ ತನ್ನ ಕರ್ತವ್ಯ ಪ್ರಥಮವಾಗಿರುತ್ತದೆ. ಸಾರ್ವಜನಿಕ ಸೇವೆಗೆ ಮೊದಲು ಆದ್ಯತೆ ನೀಡಬೇಕಾಗುತ್ತದೆ. ಸಮಾಜದಲ್ಲಿ ಕಷ್ಟದಲ್ಲಿರುವವರು ದೇವಸ್ಥಾನಕ್ಕೆ, ನ್ಯಾಯಾಧೀಶರ ಬಳಿ ಯಾವ ರೀತಿ ಹೋಗುತ್ತಾರೋ ಅದೇ ರೀತಿ ತಮ್ಮ ಕಷ್ಟ ಮತ್ತು ಸಮಸ್ಯೆಗಳನ್ನು ಹೇಳಿಕೊಳ್ಳಲು ಪೊಲೀಸರ ಬಳಿಯೂ ಬರುತ್ತಾರೆ. ಅವರ ಕಷ್ಟಕ್ಕೆ ಸ್ಪಂದನೆ ಕೊಡುವುದು ಮತ್ತು ಅವರಿಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪ್ರಾಮಾಣಿಕ ಪ್ರಯತ್ನ ನಡೆಸಿದಾಗ ನಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಸುಳ್ಯದಲ್ಲಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿರುವ ನವೀನ್ ಚಂದ್ರ ಜೋಗಿ ಸೆ.25 ರಂದು ಸುಳ್ಯದ ಬಂಟರ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪುತ್ತೂರು ಡಿವೈಎಸ್ ಪಿ ಗಾನಾ ಪಿ ಕುಮಾರ್ ಅಧ್ಯಕ್ಷತೆ ವಹಿಸಿ, ವರ್ಗಾವಣೆಗೊಂಡ ನವೀನ್ ಚಂದ್ರ ಜೋಗಿಯವರನ್ನು ಸನ್ಮಾನಿಸಿ ಮಾತನಾಡಿ ಜೋಗಿಯವರ ಕರ್ತವ್ಯದ ನಿಷ್ಠೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಹಾಗೂ ಸುಳ್ಯಕ್ಕೆ ನೂತನವಾಗಿ ಆಗಮಿಸಿದ ಸರ್ಕಲ್ ಇನ್ ಸ್ಪೆಕ್ಟರ್ ಮೋಹನ್ ಕೊಠಾರಿಯವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.
ಬೆಳ್ಳಾರೆ ಸಬ್ ಇನ್ ಸ್ಪೆಕ್ಟರ್ ಅಶೋಕ್, ಸುಬ್ರಹ್ಮಣ್ಯ ಪೋಲೀಸ್ ಸಬ್ ಇನ್ ಸ್ಪೆಕ್ಟರ್ ಕಾರ್ತಿಕ್,ವಿಟ್ಲ ಪೋಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ರತನ್ ಕುಮಾರ್,ನಿವೃತ್ತ ಎಸ್.ಐ. ನಾರಾಯಣ ರೈ ಮೇನಾಲ,ನಿವೃತ್ತ ಎ.ಎಸ್.ಐ. ಚಂದಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಳೆದ ಮೂರೂವರೆ ವರ್ಷಗಳಿಂದ ನವೀನ್ ಚಂದ್ರ ಜೋಗಿ ಅವರು ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಬಗ್ಗೆ ಪೋಲೀಸ್ ಸಿಬ್ಬಂದಿಗಳಾದ ಮಂಜುನಾಥ್,ಸಂಧ್ಯಾಮಣಿ, ಹಾಗೂ ಸಾರ್ವಜನಿಕರ ವತಿಯಿಂದ ನ.ಪಂ.ಮಾಜಿ ಸದಸ್ಯ ಕೆ.ಎಂ.ಮುಸ್ತಫ, ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ, ಕಾರ್ಮಿಕ ಸಂಘಟನೆಯ ಮುಖಂಡ ಕೆ ಪಿ ಜಾನಿ, ವಿಟ್ಲ ಪೊಲೀಸ್ ಠಾಣಾ ಎಸ್ ಐ ರತ್ನಕುಮಾರ್ ಮಾತನಾಡಿ ಶುಭ ಹಾರೈಸಿದರು.
ಎಸ್.ಐ. ಈರಯ್ಯ ದೂಂತೂರು ಪ್ರಾಸ್ತಾವಿಕ ಮಾತನಾಡಿ ತಾನು ಹಿರಿಯ ಅಧಿಕಾರಿ ಜೋಗಿಯವರೊಂದಿಗೆ ಕರ್ತವ್ಯದಲ್ಲಿ ಬೆರೆತ ಕ್ಷಣಗಳ ಬಗ್ಗೆ ಮತ್ತು ಅವರ ಕಾರ್ಯವೈಖರಿಯಗಳ ಬಗ್ಗೆ ಮಾತನಾಡಿ ಸಭೆಯಲ್ಲಿ ಭಾಗವಹಿಸಿದ್ದ ಸರ್ವರನ್ನು ಸ್ವಾಗತಿಸಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ್ದ ಸುಳ್ಯದ ವಿವಿಧ ಸಂಘ-ಸಂಸ್ಥೆಗಳು,ರಾಜಕೀಯ ಸಾಮಾಜಿಕ ಕ್ಷೇತ್ರದ ಮುಖಂಡರುಗಳು,ಶಿಕ್ಷಣ ಕೇಂದ್ರಗಳ ನೇತಾರರು ವರ್ಗಾವಣೆ ಗೊಂಡಿರುವ ಮತ್ತು ನೂತನವಾಗಿ ಆಗಮಿಸಿರುವ ತಮ್ಮ ನೆಚ್ಚಿನ ಅಧಿಕಾರಿಗಳಿಗೆ ಶಾಲು,ಪೇಟ, ಹಾರ,ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು. ದೇವರಾಜ್ ಕೋಲ್ಚಾರ್ ವಂದಿಸಿದರು.
ಬಳಿಕ ಸಾರ್ವಜನಿಕ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.