ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸದ ಕಾಂಗ್ರೆಸ್: ಅಶೋಕ್ ರೈಗೆ ಟಿಕೆಟ್ ಪಕ್ಕಾ ಎನ್ನುತ್ತಿದ್ದ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಲಾಬಿ? ತೀವ್ರ ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ
ಪುತ್ತೂರು: ರಾಜ್ಯ ವಿಧಾನ ಸಭೆ ಚುನಾವಣೆ ಗೆ ದ. ಕ ಜಿಲ್ಲೆಯ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದ್ದು ಇನ್ನು ಮೂರು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಯನ್ನು ಮುಂದೂಡಿದೆ.
ಕುತೂಹಲ ಹುಟ್ಟಿಸಿರುವ ಉಡುಪಿ, ಕಾರ್ಕಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರದ ಅಭ್ಯರ್ಥಿಯನ್ನು ಈ ಪಟ್ಟಿಯಲ್ಲಿ ಬಿಡುಗಡೆ ಮಾಡಿಲ್ಲ.
ಈ ಬಾರಿ ಹೆಚ್ಚಿನ ಗಮನ ಸೆಳೆದಿರುವ ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಹೆಸರು ಅಂತಿಮ ಎಂದೇ ಹೇಳಲಾಗಿತ್ತು. ಇದೀಗ ಕೊನೆಯ ಕ್ಷಣದಲ್ಲಿ ಪುತ್ತೂರು ಅಭ್ಯರ್ಥಿ ಸ್ಥಾನಕ್ಕೆ ಭಾರೀ ಲಾಬಿ ನಡೆದಿದೆ ಎನ್ನಲಾಗಿದ್ದು ಅಭ್ಯರ್ಥಿ ಆಯ್ಕೆಯನ್ನು ಆ ಕಾರಣಕ್ಕಾಗಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡಬೇಕೆಂದು ಮಹಿಳಾ ಕಾಂಗ್ರೆಸ್ ವತಿಯಿಂದ ಪುತ್ತೂರಿನಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆದಾಗಲೇ ಪಕ್ಷದೊಳಗೆ ಟಿಕೆಟ್ ಗೆ ಲಾಬಿ ಇರುವ ಗುಸು ಗುಸು ಸುದ್ದಿ ಕೇಳಿ ಬಂದಿತ್ತು. ಶಕುಂತಳಾ ಶೆಟ್ಟಿಯವರೂ ಟಿಕೆಟ್ ರೇಸ್ ನಲ್ಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಮತ್ತೊಮ್ಮೆ ಆರಂಭಗೊಂಡಿತ್ತು.
ಅಲ್ಲದೇ ಮಹಿಳೆ ಎಂಬ ಕಾರಣಕ್ಕೆ ಮತ್ತು ಒಕ್ಕಲಿಗ ಕೋಟಾದಡಿಯಲ್ಲಿ ಪುತ್ತೂರಿನ ಯುವ ನಾಯಕಿ ದಿವ್ಯಪ್ರಭಾ ಗೌಡ ಅವರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯೂ ಹೈಕಮಾಂಡ್ ಅಂಗಳದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಅದಲ್ಲದೇ ಅನೇಕ ವರ್ಷಗಳಿಂದ ಪುತ್ತೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಕಾವು ಹೇಮನಾಥ ಶೆಟ್ಟಿಯವರಿಗೆ ಒಂದು ಬಾರಿ ಅವಕಾಶ ನೀಡುವ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ.
ಎಲ್ಲ ಅಸಮಾಧಾನಗಳನ್ನು ಸರಿಪಡಿಸಿಕೊಂಡು 2ನೇ ಪಟ್ಟಿಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್ ಘೋಷಿಸಲಿದೆ.
ಅಂತಿಮವಾಗಿ ಅಶೋಕ್ ರೈ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದ್ದು ಅದರ ಮಧ್ಯೆ ಆಕಾಂಕ್ಷಿಗಳ ಲಾಬಿ ಆಗಿರುವುದರಿಂದ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕುತೂಹಲ ಮೂಡಿಸಿದೆ.