ಸೋಲಿಲ್ಲದ ಸರದಾರ ಅಂಗಾರರ ಸುಳ್ಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಚುನಾವಣಾ ಬಹಿಷ್ಕಾರದ ಬ್ಯಾನರ್..!
ವಿಶೇಷ ವರದಿ: ಹಸೈನಾರ್ ಜಯನಗರ
ದಿನದಿಂದ ದಿನಕ್ಕೆ ಸುಳ್ಯ ತಾಲೂಕಿನಾದ್ಯಂತ ವಿವಿದ ಬೇಡಿಕೆಗಳನ್ನು ಆಗ್ರಹಿಸಿ ಸುಳ್ಯದ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕಾರದ ಬ್ಯಾನರ್ ಗಳನ್ನು ಅಳವಡಿಸಿ ತಮ್ಮ ಆಕ್ರೋಶ ಮತ್ತು ಬೇಡಿಕೆಗಳನ್ನು ವ್ಯಕ್ತಪಡಿಸುವ ಘಟನೆಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸುಳ್ಯದಲ್ಲಿ ಪ್ರತ್ಯಕ್ಷಗೊಂಡಿರುವ ಚುನಾವಣಾ ಬಹಿಷ್ಕಾರದ ಬ್ಯಾನರ್ ಗಳ ಸಂಖ್ಯೆ ದ.ಕ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.
ಚುನಾವಣೆಗಳು ಸಮೀಪಿಸುತ್ತಿದಂತೆ ಜನರು ತಮ್ಮ ಹಕ್ಕಿಗಾಗಿ ಹೋರಾಟ ಮತ್ತು ಬೇಡಿಕೆಗಳನ್ನು ಈ ರೀತಿಯಾಗಿ ಹೊರಹಾಕಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನಗಳಿಂದ ಕೆಲವು ಕಡೆಗಳಲ್ಲಿ ಫಲ ಸಿಕ್ಕಿದರೆ ಮತ್ತು ಕೆಲವು ಕಡೆಗಳಲ್ಲಿ ಅದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಭರವಸೆಗಳಿಗೆ ಮಾತ್ರ ಸೀಮಿತವಾಗಿ ಉಳಿಯುತ್ತದೆ.
ಕಳೆದ ಕೆಲವು ದಿನಗಳ ಹಿಂದೆ ದುಗ್ಗಳಡ್ಕ ಮತ್ತು ಕೊಡಿಯಾಲಬೈಲು ಸಂಪರ್ಕದ ರಸ್ತೆಗಾಗಿ ಅಲ್ಲಿಯ ನಿವಾಸಿಗಳು ಪ್ರತಿಭಟನೆಯನ್ನು ಮಾಡುವ ಮೂಲಕ ರಸ್ತೆಗಾಗಿ ದೇಣಿಗೆ ಸಂಗ್ರಹವನ್ನು ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದು ಭಾರೀ ಸದ್ದು ಮಾಡಿತ್ತು.
ಸುಳ್ಯ ಕ್ಷೇತ್ರದಿಂದ ಕಳೆದ ಆರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಎಸ್ ಅಂಗಾರರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಸಚಿವರಾಗಿದ್ದುಕೊಂಡು ಕೆಲವು ಯೋಜನೆಗಳನ್ನು ಸುಳ್ಯಕ್ಕೆ ತಂದಿರುವ ಇವರಿಗೆ ಇತ್ತೀಚಿನ ದಿನಗಳಲ್ಲಿ ತಲೆ ಎತ್ತುತ್ತಿರುವ ಚುನಾವಣಾ ಬಹಿಷ್ಕಾರದ ಫಲಕಗಳು ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
6 ಬಾರಿಯ ಚುನಾವಣೆಯಲ್ಲಿ ಸೋಲಿಲ್ಲದ ಸರದಾರನಾಗಿರುವ ಅಂಗಾರರಿಗೆ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಪಕ್ಷದ ಹೈಕಮಾಂಡ್ ಟಿಕೆಟ್ ನೀಡುತ್ತದೆಯೋ ಅಥವಾ ಇತರ ಆಕಾಂಕ್ಷಿಗಳಲ್ಲಿ ಯಾರಿಗಾದರೂ ಅವಕಾಶ ಮಾಡಿಕೊಡುತ್ತದೆಯೋ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಈ ರೀತಿಯ ಬ್ಯಾನರ್ಗಳು ಅಲ್ಲಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಫಲಾನುಭವಿಗಳು ಕೂಡ ತಮ್ಮ ಹಕ್ಕುಗಳ ಹೋರಾಟವನ್ನು ಛಲ ಬಿಡದೆ ಪ್ರಯತ್ನಿಸಿದಲ್ಲಿ ಮಾತ್ರ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬಹುದು ಎನ್ನುವುದು ಕೂಡಾ ಅಷ್ಟೇ ಸತ್ಯ.
ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರು ನೀಡುವ ಆಶ್ವಾಸನೆಗಳನ್ನು ಮತ್ತು ಅವರ ಓಲೈಕೆಯ ಮಾತುಗಳನ್ನು ನಂಬಿ ಈ ಬ್ಯಾನರ್ಗಳನ್ನು ಅಳವಡಿಸಲು ಭಾಗಿಯಾದ ಕೆಲವರು ಚುನಾವಣಾ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಅವರವರ ನಾಯಕರ ಗೆಲುವಿಗಾಗಿ ಪ್ರಯತ್ನಿಸುವುದು ಕೂಡಾ ಸಹಜವಾಗಿ ಕಂಡು ಬರುವ ಸಂಗತಿಗಳಾಗಿದೆ.
ಸುಳ್ಯಕ್ಕೆ ಸಂಬಂಧಿಸಿದಂತೆ ಈ ಹಿಂದಿನ ತಹಶೀಲ್ದಾರರ ವರ್ಗಾವಣೆಯ ಬಳಿಕ ನೂತನವಾಗಿ ತಹಶೀಲ್ದಾರ್ ನೇಮಕಾತಿಯಾಗಿ ಕೆಲವು ದಿನ ಕಳೆದಿದ್ದರೂ ಕೂಡಾ ಅವರು ತಮ್ಮ ಅಧಿಕಾರವಹಿಸಿಕೊಳ್ಳದೆ ಇರುವುದು ಕೂಡ ಪ್ರಸ್ತುತ ಪರಿಸ್ಥಿತಿಯಲ್ಲಿ ಮತ್ತೂ ಸಮಸ್ಯೆಯಾಗಿದೆ. ಚುನಾವಣಾ ಬಹಿಷ್ಕಾರದ ಫಲಕಗಳು ಬೀಳುವ ಸ್ಥಳಕ್ಕೆ ಕನಿಷ್ಠಪಕ್ಷ ತಹಶೀಲ್ದಾರರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವ ಅವಶ್ಯಕತೆ ಇದೀಗ ಹೆಚ್ಚಾಗಿ ಕಂಡುಬರುತ್ತಿದೆ.