ಸುಳ್ಯ ನಗರದ ಹಲವು ಕಡೆ ರಸ್ತೆ ಅಗೆದು ಕಾಮಗಾರಿ ಸ್ಥಗಿತ; ಜನರಿಗೆ ತೊಂದರೆ: ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ ಸ್ಥಳೀಯರು
ಸುಳ್ಯ ನಗರಕ್ಕೆ ನಗರೋತ್ಥಾನದಲ್ಲಿ ರೂ.2 ಕೋಟಿ 70 ಲಕ್ಷ ಅನುದಾನ ಬಂದಿದ್ದು ನಗರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿಗಾಗಿ ಹಂಚಲಾಗಿದೆ. ಆದರೆ ಕೆಲಸ ವಹಿಸಿಕೊಂಡಿರುವ ಗುತ್ತಿಗೆದಾರರು ಎಲ್ಲಾ ರಸ್ತೆಗಳನ್ನು ಅಗೆದು ಹಾಕಿ 20 ದಿನಗಳಾಗಿದ್ದು ಸ್ಥಳೀಯ ನಿವಾಸಿಗಳು ನಡೆದಾಡಲು ಅರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅಗೆದು ಹಾಕಿರುವ ರಸ್ತೆಯನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು ಎಂದು ಸ್ಥಳೀಯ ನಿವಾಸಿ ಗುತ್ತಿಗೆದಾರ ಗೋಪಾಲಕೃಷ್ಣ ಕರೋಡಿಯವರು ಆಗ್ರಹಿಸಿದ್ದಾರೆ.
ಸುಳ್ಯ ಪ್ರೆಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೀರಮಂಗಲ, ಬೂಡು, ಭಸ್ಮಡ್ಕ, ಜಯನಗರ ಹೀಗೆ ನಗರೋತ್ಥಾನದ ಕಾಮಗಾರಿ ವಹಿಸಿಕೊಂಡವರು ಎಲ್ಲಾ ಕಡೆ ರಸ್ತೆ ಅಗೆದು ಹೋಗಿದ್ದಾರೆ. ಕೇಳಿದರೆ ನಮಗೆ ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿಯಲ್ಲಿ ಕೆಲಸ ಇದೆ ಎಂದು ಉದ್ಧಟತನದಿಂದ ಮಾತನಾಡುತ್ತಾರೆ. ಕೆಲಸ ಮಾಡದ ಮೇಲೆ ರಸ್ತೆ ಅಗೆದು ಹೋದದ್ದು ಎಷ್ಟು ಸರಿ?. ಇಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದ ಅವರು ಸಮಸ್ಯೆ ಹೇಳಿಕೊಳ್ಳಲು ಒಂದು ವಾರದಿಂದ ನಗರ ಪಂಚಾಯತ್‌ಗೆ ಫೋನ್ ಮಾಡಿದರೆ ಅಧ್ಯಕ್ಷರಿಗೂ ಕರೆ ಮಾಡಿದರೆ ಅವರು ಕರೆ ಸ್ವೀಕಾರ ಮಾಡುತ್ತಿಲ್ಲ. ವಾಪಸ್ ಮಾಡುವುದೂ ಇಲ್ಲ. ಕುರುಂಜಿಭಾಗ್ ವಾರ್ಡ್ ಸದಸ್ಯ ಸುಧಾಕರ್‌ಗೂ ಹೇಳಿದ್ದೇವೆ. ಬೂಡು ರಾಧಾಣ್ಣನಿಗೂ ಹೇಳಲಾಗಿದೆ ಯಾರೂ ಸ್ಪಂದನೆ ನೀಡುತ್ತಿಲ್ಲ ಎಂದವರು ದೂರಿಕೊಂಡರಲ್ಲದೆ, ನಗರೋತ್ಥಾನದ ಅಧಿಕಾರಿಗಳು ಈ ರಸ್ತೆಯನ್ನು ಸಮರ್ಪಕವಾಗಿ ಮಾಡಿಸಬೇಕು ಎಂದು ಒತ್ತಾಯಿಸಿದರು.
ಈಗ ರಸ್ತೆಯನ್ನು ಮೂರು ಇಂಚು ಅಗೆದಿದ್ದಾರೆ ಅದು ಸರಿಯಾದ ಕ್ರಮವಲ್ಲ. ನಗರೋತ್ಥಾನದ ರಸ್ತೆ ಕಾಂಕ್ರೀಟ್ ಆಗುವಾಗ 16 ಇಂಚು ಇರಬೇಕು. ಆದ್ದರಿಂದ ಅಷ್ಟು ಅಗೆದು ಮತ್ತೆ 6 ಇಂಚು ಜಿಎಸ್‌ಪಿ, 4ಇಂಚು ಬೆಡ್, 6 ಇಂಚು ಸಿಸಿ ಕಾಂಕ್ರೀಟ್ ಹೀಗೆ 16ಇಂಚು ಬರಬೇಕು. ಕಾಂಕ್ರೀಟ್ ಆದ ಬಳಿಕ ರಸ್ತೆಯ ಬದಿಗೆ ಮಣ್ಣು ಹಾಕುವಂತಿರಬಾರದು ಎಂದು ಅವರು ವಿವರ ನೀಡಿದರಲ್ಲದೆ, ರಸ್ತೆ ಯಾವ ರೀತಿ ಇರಬೇಕೆಂದು ನಾನು ಮಾಹಿತಿ ಹಕ್ಕಿನಿಂದ ವಿವರ ಪಡೆದಿರುವುದಾಗಿ ತಿಳಿಸಿದರು. ಸುಳ್ಯ ರಥಬೀದಿಯ ರಸ್ತೆ ಹಾಳಾಗಿದೆ. ಅದು ಕ್ರಮ ಪ್ರಕಾರ ಆಗಿಲ್ಲದಿರುವುದೇ ಅದಕ್ಕೆ ಕಾರಣ. ಆದ್ದರಿಂದ ನಗರೋತ್ಥಾನದ ಕಾಮಗಾರಿ ಆದಷ್ಟು ಬೇಗ, ಕಳಪೆಯಾಗದ ರೀತಿಯಲ್ಲಿ ನಡೆಯಬೇಕು ಎಂದವರು ಆಗ್ರಹಿಸಿದರು.
ಭಸ್ಮಡ್ಕದಲ್ಲಿ ನಾಲ್ಕು ರಸ್ತೆ ಸೇರುವಲ್ಲಿ ಅನುದಾನ ಇರಿಸಿದ್ದಾರೆ. ರಸ್ತೆ ಅಗೆದಿದ್ದಾರೆ. ಅಲ್ಲಿ ಪೈಪ್ ಒಡೆದು ಕೆಲಸರಾಗಿ ಹೋಗಲು ಸಾಧ್ಯವಾಗದ ಪರಿಸ್ಥಿತಿ ಇದೆ.
ರಸ್ತೆಗೆ ಕಾಂಕ್ರೀಟ್ ಆದ ಬಳಿಕ ಕಾಂಕ್ರೀಟ್ ಎತ್ತರ ನಿಲ್ಲಬಾರದು. ಹಾಗೆ ನಿತ್ತಾಗ ರಸ್ತೆಯ ಬದಿಗೆ ಮಣ್ಣು ಹಾಕಿ ಸರಿ ಪಡಿಸುತ್ತಾರೆ. ಮಳೆಗಾಲದಲ್ಲಿ ಮಣ್ಣು ಹೋಗಿ ಸಮಸ್ಯೆಯಾಗುತ್ತದೆ ಎಂದು ಕಿಶನ್ ಹಳೆಗೇಟು ಹೇಳಿದರು.
ದೇವಿಪ್ರಸಾದ್ ಬಾಳೆಕೋಡಿ, ಅನಿಲ್ ಕಾಯರ್ತೋಡಿ, ಹೇಮಪ್ರಕಾಶ್ ಕುಂತಿನಡ್ಕ, ಸಂತೋಷ್ ಸುಳ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.