ವೈದ್ಯರ ಅನುಮಾನಾಸ್ಪದ ಸಾವು ತನಿಖೆಗಾಗ್ರಹಿಸಿ ಪುತ್ತೂರಿನಲ್ಲಿ ಪ್ರತಿಭಟನೆ
ಪುತ್ತೂರು: ಮೂಲತ: ಪುತ್ತೂರಿನವರಾದ ಬದಿಯಡ್ಕದ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಅವರ ಅನುಮಾನಾಸ್ಪದ ಸಾವನ್ನು ಖಂಡಿಸಿ ಮತ್ತು ಸೂಕ್ತ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನ.14ರಂದು ಸಂಜೆ ಅಮರ ಜವಾನ್ ಜ್ಯೋತಿ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪುತ್ತೂರಿನ ಹಲವಾರು ವೈದ್ಯರ ಸಹಿತ ನೂರಾರು ಮಂದಿ ಪಾಲ್ಗೊಂಡರು.

ವೈದ್ಯ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಸಮಾಜಕ್ಕೆ ಹಲವು ವರ್ಷಗಳಿಂದ ಸೇವೆ ನೀಡಿದ ಸಜ್ಜನ, ಹಿರಿಯ ವೈದ್ಯ ಡಾ. ಕೃಷ್ಣಮೂರ್ತಿ ಅವರ ಹತ್ಯೆಯಾಗಿರಲಿ ಅಥವಾ ಆತ್ಮಹತ್ಯೆಯಾಗಿರಲಿ ಸೂಕ್ತ ತನಿಖೆಯ ಮೂಲಕ ಹೊರಬರಲಿ. ಆತ್ಮಹತ್ಯೆಗೆ ಪ್ರೇರಣೆಯೂ ಹತ್ಯೆ ಮಾಡಿದ್ದಕ್ಕೆ ಸಮ ಎಂದು ಹೇಳಿದರು.
ಶಿವಶಂಕರ ಬೋನಂತಾಯ ಮಾತನಾಡಿ, ಇಂದು ಕೇರಳದಂತಹ ರಾಜ್ಯಗಳಲ್ಲಿ ಹಿಂದೂಗಳಿಗೆ ಅಭದ್ರತೆಯ ವಾತಾವರಣ ಇದೆ. ಹಿರಿಯ ವೈದ್ಯರ ಸಾವಿರ ಕುರಿತ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಬೇಕು. ಕೇರಳ ಸರಕಾರದಲ್ಲಿ ನಮಗೆ ನ್ಯಾಯ ಸಿಗುವ ಧೈರ್ಯ ಇಲ್ಲ ಎಂದು ಹೇಳಿದರು.
ಐಎಂಎ ಮುಖಂಡ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಮಾತನಾಡಿ, ಡಾ. ಕೃಷ್ಣಮೂರ್ತಿ ಅವರ ಸಾವು ಖಂಡಿತವಾಗಿಯೂ ಆತ್ಮಹತ್ಯೆ ಅಲ್ಲ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮುರಳಿಕೃಷ್ಣ ಹಸಂತಡ್ಕ ಮತ್ತಿತರರು ಮಾತನಾಡಿದರು.