ಕುಂತೂರು: ಆಟೋರಿಕ್ಷಾ ಗೋಡೆಗೆ ಡಿಕ್ಕಿ–ನಾಲ್ವರಿಗೆ ಗಾಯ
ಕಡಬ: ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನ.10ರ ರಾತ್ರಿ ಕಡಬ ತಾಲೂಕಿನ ಕುಂತೂರು ಗ್ರಾಮದ ಪದವು ಮುರತ ಚಡವು ಎಂಬಲ್ಲಿ ನಡೆದಿದೆ.

ಆಟೋರಿಕ್ಷಾವನ್ನು ರಮೇಶ್ (36) ಎಂಬವರು ಚಲಾಯಿಸಿಕೊಂಡು ಕಡಬದಿಂದ ಅಲಂಕಾರ ಕಡೆಗೆ ತೆರಳುತ್ತಿದ್ದರು. ಈ ವೇಳೆ ಆಟೋರಿಕ್ಷಾದ ಹಿಂಬದಿ ಸೀಟಿನಲ್ಲಿ ಭರತ್ (29), ಲಕ್ಷ್ಮಣ (34) ಹಾಗೂ ಇಳವರಸನ್ (31) ಪ್ರಯಾಣಿಸುತ್ತಿದ್ದರು. ಕುಂತೂರು ಗ್ರಾಮದ ಪದವು ಮುರತ ಚಡವು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾ ರಸ್ತೆ ಬದಿಯ ಗೋಡೆಗೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಆಟೋರಿಕ್ಷಾದಲ್ಲಿದ್ದ ನಾಲ್ವರೂ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 134/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(a)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




