ಕರಾವಳಿಕ್ರೈಂ

ಕಡಬ: ಬಾಡಿಗೆ ಹಣ ಕೇಳಿದ ಆಟೋ ಚಾಲಕನ ಮೇಲೆ ಹಲ್ಲೆ –ಪ್ರಕರಣ ದಾಖಲು

ಕಡಬ: ಬಾಡಿಗೆ ಹಣ ನೀಡುವಂತೆ ಕೇಳಿದ ಆಟೋ ರಿಕ್ಷಾ ಚಾಲಕನ ಮೇಲೆ ವ್ಯಕ್ತಿಯೊಬ್ಬ ಹಾಗೂ ಆತನೊಂದಿಗೆ ಬಂದಿದ್ದ ಇತರರು ಸೇರಿ ಹಲ್ಲೆ ನಡೆಸಿದ ಘಟನೆ ಕಡಬದ ಕುರಿಯಾಳಕೊಪ್ಪದಲ್ಲಿ ನ.4ರಂದು ರಾತ್ರಿ ನಡೆದಿದೆ.


ಕಡಬ ಕೋಡಿಂಬಾಳ ನಿವಾಸಿ ಬೇಬಿಕೃಷ್ಣ (49) ಹಲ್ಲೆಗೊಳಗಾದ ಆಟೋ ಚಾಲಕ. ಇವರು ಕಡಬದ 2ನೇ ಆಟೋ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನ.4ರಂದು ರಾತ್ರಿ ಆಟೋ ನಿಲ್ದಾಣದಲ್ಲಿದ್ದಾಗ ಹಿಂದಿ ಭಾಷಿಕ ಅಪರಿಚಿತ ವ್ಯಕ್ತಿಯೊಬ್ಬ ಕುರಿಯಾಳಕೊಪ್ಪಕ್ಕೆ ಬಾಡಿಗೆಗೆ ಕರೆದಿದ್ದಾನೆ. ಅದರಂತೆ ಆತನನ್ನು ಆಟೋದಲ್ಲಿ ಕೂರಿಸಿಕೊಂಡು ಕುರಿಯಾಳಕೊಪ್ಪಕ್ಕೆ ತೆರಳಿದ್ದಾರೆ. ಬಳಿಕ ಬಾಡಿಗೆ ಹಣ ನೀಡುವುದಾಗಿ ಹೇಳಿ ಕಾಯುವಂತೆ ತಿಳಿಸಿದ ವ್ಯಕ್ತಿ ಹಣ ನೀಡದೆ ಸತಾಯಿಸಿದ್ದಾನೆ ಎನ್ನಲಾಗಿದೆ.


ಈ ಹಿನ್ನೆಲೆಯಲ್ಲಿ ಬೇಬಿಕೃಷ್ಣ ಅವರು ಆತ ಉಳಿದುಕೊಂಡಿದ್ದ ಟೆಂಟ್‌ಗೆ ತೆರಳಿ ಬಾಡಿಗೆ ಹಣ ಕೇಳಿದಾಗ, ಹಣ ನೀಡದೆ ಸತಾಯಿಸಿದ್ದಾನೆ. ಬಳಿಕ ಆರೋಪಿ ಹಾಗೂ ಇತರ 3-4 ಮಂದಿ ಸ್ಥಳಕ್ಕೆ ಬಂದು ಆಟೋ ರಿಕ್ಷಾ ತೆರಳದಂತೆ ತಡೆದು ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 129/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 115(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!