ಕರಾವಳಿಕ್ರೈಂ

ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿ: ಬಸ್ ವಶಕ್ಕೆ, ಚಾಲಕನ ವಿರುದ್ಧ ಕ್ರಮ

ಮಂಗಳೂರು: ಜಪ್ಪಿನಮೊಗರಿನ ಎ.ಕೆ. ಲಾಡ್ಜ್ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ಸನ್ನು ಮಂಗಳೂರು ಸಂಚಾರ ದಕ್ಷಿಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.


ಅ.22ರಂದು ರಾತ್ರಿ ಸುಮಾರು 7.50ರ ವೇಳೆಗೆ ಜಪ್ಪಿನಮೊಗರು ಎ.ಕೆ. ಲಾಡ್ಜ್ ಎದುರು ಮಹಾಕಾಳಿ ಪಡ್ಪು ಕಡೆಗೆ ಸಾಗುವ ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ಸುಮಾರು 30ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಸ್ ಯುವಕನಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿತ್ತು.

ಅಪಘಾತದ ಪರಿಣಾಮ ಯುವಕ ರಸ್ತೆಯ ಬದಿಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಗಾಯಾಳುವನ್ನು ಉಪಚರಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಯುವಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.


ಈ ಸಂಬಂಧ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 285/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 106(1) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 134(a) ಮತ್ತು (b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣದ ತನಿಖೆಯ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, 42ನೇ ರೂಟ್‌ನಲ್ಲಿ ಸಂಚರಿಸುವ ‘SRI KATEEL’ ಹೆಸರಿನ ಬಸ್ಸೇ ಅಪಘಾತಕ್ಕೆ ಕಾರಣವಾಗಿರುವುದನ್ನು ಪತ್ತೆಹಚ್ಚಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.



ಸಿಸಿಟಿವಿ ದೃಶ್ಯಾವಳಿ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ನೀಡಿದ ಮಾಹಿತಿಯ ಆಧಾರದಲ್ಲಿ, ಕಾಸರಗೋಡು ನಿವಾಸಿ ಸುಧೀರ್ ಕೆ. (40) ಎಂಬಾತ ಬಸ್ಸನ್ನು ಚಲಾಯಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತನ ಚಾಲನಾ ಪರವಾನಗಿ ಚಾಲ್ತಿಯಲ್ಲಿರುವುದೂ ಪರಿಶೀಲನೆಯಲ್ಲಿ ಕಂಡುಬಂದಿದೆ.

ಪ್ರಕರಣದ ಮುಂದಿನ ತನಿಖೆಯಲ್ಲಿ ಬಸ್ ಚಾಲಕ ಮತ್ತು ಪ್ರಯಾಣಿಕರ ಮೊಬೈಲ್ ಲೊಕೇಶನ್ ವಿವರಗಳು ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!