ಕರಾವಳಿಕ್ರೈಂ

ಮದುವೆ ಸಮಾರಂಭದಲ್ಲಿ ಬಾಲಕಿಯ ಚಿನ್ನದ ಸರ ಕಳ್ಳತನ: ಆರೋಪಿ ಬಂಧನ


ಮಂಗಳೂರು: ಮದುವೆ ಸಮಾರಂಭ ನಡೆಯುತ್ತಿದ್ದ ಸಭಾಂಗಣದಲ್ಲಿ 3 ವರ್ಷ 6 ತಿಂಗಳ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದ ಮಹಿಳೆಯನ್ನು ಬರ್ಕೆ ಠಾಣೆಯ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿ, ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.


ಅ.18ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಟಿ.ಎಂ.ಎ. ಪೈ ಹಾಲ್‌ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಅಪರಿಚಿತ ಮಹಿಳೆಯೊಬ್ಬರು ಬಾಲಕಿಯ ಕುತ್ತಿಗೆಯಲ್ಲಿದ್ದ ಪೆಂಡೆಂಟ್ ಸಹಿತ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದರು. ಸುಮಾರು 10 ಗ್ರಾಂ ತೂಕದ ಈ ಚಿನ್ನದ ಸರದ ಅಂದಾಜು ಮೌಲ್ಯ ರೂ.1.35 ಲಕ್ಷ ಎಂದು ತಿಳಿದು ಬಂದಿದೆ.


ಈ ಕುರಿತು ಶೀಮಾಬಾನು ಅವರು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 95/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 304(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಘಟನೆ ನಡೆದ 24 ಗಂಟೆಯೊಳಗೆ ಅಂದರೆ ಅ.19ರಂದು ಆರೋಪಿತೆ ಮಿನ್ನತ್ (42), ಕೋಟೆಪುರ, ಉಳ್ಳಾಲ ನಿವಾಸಿ, ಪ್ರಸ್ತುತ ಅಕ್ಕರಕೆರೆ ಆರ್‌ಸಿಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಮಹಿಳೆಯನ್ನು ವಶಕ್ಕೆ ಪಡೆದು, ಆಕೆಯ ಬಳಿಯಿದ್ದ ಕಳವಾದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತೆಯನ್ನು ಅ.20ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಒಟ್ಟು 9 ಕಳವು ಪ್ರಕರಣಗಳಲ್ಲಿ ಆರೋಪಿ:
ಪೊಲೀಸರ ಮಾಹಿತಿಯ ಪ್ರಕಾರ, ಆರೋಪಿತೆಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಐದು ಕಳವು ಪ್ರಕರಣಗಳು ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದು, ಅವು ನ್ಯಾಯಾಲಯದ ವಿಚಾರಣೆಯಲ್ಲಿವೆ. ಈಕೆಯು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 112ರ ಅಡಿಯಲ್ಲಿ ಸಂಘಟಿತ ಅಪರಾಧದ ಅಂಶವನ್ನೂ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪತ್ತೆ ಕಾರ್ಯದಲ್ಲಿ ಬರ್ಕೆ ಠಾಣೆಯ ಪಿಎಸ್‌ಐ ಗುರುಪ್ಪ ಕಾಂತಿ, ಪಿಎಸ್‌ಐ ವಿನಾಯಕ ತೋರಗಲ್ ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!