ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ಕಾಲೇಜಿನಲ್ಲಿ ಪ್ರಾರ್ಥನಾ ದಿನಾಚರಣೆ, ಅಭಿನಂದನಾ ಸಮಾರಂಭ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಕಾಲೇಜಿನಲ್ಲಿ ಅಗಲಿದ ಉಲಮಾ ಹಾಗೂ ಉಮರಾ ನಾಯಕರ ಸ್ಮರಣಾರ್ಥ ವಿಶೇಷ ಪ್ರಾರ್ಥನಾ ದಿನಾಚರಣೆ ಹಾಗೂ ಕಾಲೇಜಿನ ಸಾಧಕ ವಿದ್ಯಾರ್ಥಿನಿಯರ ಅಭಿನಂದನಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು. ಮುಹಮ್ಮದ್ ಹಾಜಿ ಪಡೀಲ್, ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಸಮನ್ವಯದೊಂದಿಗೆ ಮುನ್ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿರುವ ಆಧ್ಯಾತ್ಮಿಕ ಮತ್ತು ಪ್ರತಿಭಾ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಉತ್ತಮ ಚಿಂತನೆ, ಸಂಸ್ಕಾರ, ಶಿಸ್ತು, ಸೇವಾ ಮನೋಭಾವ, ಪರಸ್ಪರ ಗೌರವ, ಮಾನವೀಯ ಮೌಲ್ಯಗಳು ಹಾಗೂ ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು. ಕಾಲೇಜಿನ ವಿದ್ಯಾರ್ಥಿನಿಯರು ಶೈಕ್ಷಣಿಕ ಹಾಗೂ ವಿವಿಧ ಪ್ರತಿಭಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಸಾಬ್, ಖುರ್ಆನ್ ಪಾರಾಯಣ, ಪ್ರಾರ್ಥನೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಉತ್ತಮ ಚಿಂತನೆ ಮತ್ತು ಸತ್ಕಾರ್ಯಗಳತ್ತ ದಾರಿ ತೋರಿಸುತ್ತವೆ ಎಂದರು.
ಕಾಲೇಜಿನ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ದರ್ಬೆ ಮಾತನಾಡಿ, ವಿದ್ಯಾರ್ಥಿನಿಯರಿಗೆ ಪಠ್ಯ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಹಾಗೂ ವಿವಿಧ ಪ್ರತಿಭೆಗಳ ತರಬೇತಿಗೂ ಸಂಸ್ಥೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ಸಾಧಿಸುತ್ತಿರುವ ಯಶಸ್ಸು ಸಂಸ್ಥೆಯ ಶೈಕ್ಷಣಿಕ ವಾತಾವರಣ ಹಾಗೂ ಸಮರ್ಪಿತ ಮಾರ್ಗದರ್ಶನಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಂಸ್ಥೆಯ ಅಧೀನದ ದಾರುಲ್ ಫಲಾಹ್ ಮದ್ರಸ ಅಧ್ಯಾಪಕ ನಝೀರ್ ಅರ್ಶದಿ ಮಾತನಾಡಿ, ಧರ್ಮ ಮತ್ತು ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿ ಅಗಲಿದ ಗಣ್ಯರನ್ನು ಸ್ಮರಿಸುವುದರೊಂದಿಗೆ ಅವರಿಗಾಗಿ ಪ್ರಾರ್ಥಿಸುವುದು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವ ಹಾಗೂ ಸ್ಮರಣೆಯಾಗಿದೆ ಎಂದರು.
ಸಮಾರಂಭದಲ್ಲಿ ಕಳೆದ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನೊಂದಿಗೆ ಕಾಲೇಜಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಾದ ಸಹ್ಲ ಮತ್ತು ಸಾಲಿಮಾ ಅವರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು ವೈಯಕ್ತಿಕವಾಗಿ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಪ್ರಾರ್ಥನಾ ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದು ಸ್ವಾಗತಿಸಿ, ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಲಯ ನಿರ್ವಾಹಕ ಯೂಸುಫ್ ಸಹಕರಿಸಿದರು.
ಖತಮುಲ್ ಖುರ್ ಆನ್:
ಕಾರ್ಯಕ್ರಮದ ಮೊದಲು ಕಾಲೇಜಿನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ತಹ್ಲೀಲ್ ಮತ್ತು ಪವಿತ್ರ ಖತಮುಲ್ ಖುರ್ ಆನ್ ಪಾರಾಯಣ ನೆರವೇರಿಸಿದರು.



