ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ
ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆಯೊಡ್ಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಬಂಧಿತ ಆರೋಪಿ.
ಘಟನೆಯ ವಿವರ:
2025ರ ಸೆಪ್ಟೆಂಬರ್ನಿಂದ ನವೆಂಬರ್ ಅವಧಿಯಲ್ಲಿ ಆರೋಪಿ ಶ್ರೀಕಾಂತ್, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಘಟನೆ ಬಗ್ಗೆ ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು.
ಈ ಕುರಿತು ಸಂತ್ರಸ್ತರ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಿನಾಂಕ 23.08.2026 ರಂದು ಅಪರಾಧ ಸಂಖ್ಯೆ 60/2026ರಲ್ಲಿ ಬಿಎನ್ಎಸ್ (BNS) ಹಾಗೂ ಪೋಕ್ಸೋ (POCSO) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಶ್ರೀಕಾಂತ್ ತಲೆಮರೆಸಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಧರ್ಮಸ್ಥಳ ಠಾಣಾ ಪಿ.ಎಸ್.ಐ ಸಮರ್ಥ್ ಆರ್. ಗಾಣಿಗೇರ ನೇತೃತ್ವದಲ್ಲಿ ಹೆಚ್.ಸಿ. 418 ವೃಷಭ, ಹೆಚ್.ಸಿ. 369 ಮಹೇಶ್ ಹಾಗೂ ಸಿ.ಪಿ.ಸಿ. 975 ಚರಣ್ ರಾಜ್ ಅವರನ್ನೊಳಗೊಂಡ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ, ದಿನಾಂಕ 25.08.2026 ರಂದು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.



