ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ, ಆರೋಪಿ ಬಂಧನ
ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

14 ವರ್ಷದ ಸಂತ್ರಸ್ತ ಬಾಲಕಿ ಕೆಲವು ತಿಂಗಳುಗಳಿಂದ ಆರೋಪಿಯ ರಿಕ್ಷಾದಲ್ಲಿ ಶಾಲೆಗೆ ತೆರಳಿ ಬರುತ್ತಿದ್ದಳು. ಈ ವೇಳೆ ಆರೋಪಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದ್ದು, ಬಾಲಕಿ ಇದಕ್ಕೆ ಪ್ರತಿರೋಧಿಸಿದಾಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಹೆದರಿದ ಬಾಲಕಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ.
ಮುಂದುವರಿದಂತೆ, ಆ.13ರಂದು ಸಂಜೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಆರೋಪಿ ವೇಣೂರು ನಿವಾಸಿ ಜಮಾಲುದ್ದೀನ್ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಂತ್ರಸ್ತ ಬಾಲಕಿ ದಿನಾಂಕ 15.08.2026ರಂದು ನೀಡಿದ ದೂರಿನ ಆಧಾರದ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 56/2026ರಂತೆ BNS 2023ರ ಕಲಂ 75(2), 64(1), 65(1), 351(3) ಹಾಗೂ ಪೋಕ್ಸೋ ಕಾಯಿದೆ-2012ರ ಕಲಂ 4(2), 8, 12ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಜಮಾಲುದ್ದೀನ್ನನ್ನು ಆ.15ರಂದು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


