ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸಾರೆಪುಣಿಯ ಫಾತಿಮತ್ ನಿಶಾನ ಮನೆಗೆ ಶಾಸಕ ಅಶೊಕ್ ರೈ ಭೇಟಿ
ಪುತ್ತೂರು: ಸಂಪಾಜೆಯ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಸಾರೆಪುಣಿಯ ಫಾತಿಮತ್ ನಿಶಾನ ವಿಚಾರದಲ್ಲಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದು ಘಟನೆಯ ಗಂಭೀರತೆಯ ಬಗ್ಗೆ ತಿಳಿದುಕೊಂಡಿದ್ದೇನೆ, ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಹೆಚ್ಚಿನ ವಿಚಾರಗಳು ಕೆಲವೇ ದಿನಗಳಲ್ಲಿ ತಿಳಿಯಲಿದೆ, ಇದೊಂದು ಕೊಲೆ ಎನ್ನುವ ಆರೋಪ ಇರುವ ಹಿನ್ನೆಲೆಯಲ್ಲಿ ಗೃಹ ಸಚಿವರ ಜೊತೆ ಮಾತನಾಡುವುದಲ್ಲದೇ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ನನ್ನಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಜು.25ರಂದು ಕೆದಂಬಾಡಿ ಗ್ರಾಮದ ಸಾರೆಪುಣಿಯಲ್ಲಿರುವ ಮೃತ ಫಾತಿಮತ್ ನಿಶಾನ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಹೇಳಿದರು.

ಮನೆಯವರಿಗೆ ಸಾಂತ್ವನ ತಿಳಿಸಿದ ಶಾಸಕರು ಮೃತ ಫಾತಿಮತ್ ನಿಶಾನ ಅವರ ತಾಯಿ ಜುಬೈದಾರವರ ಜೊತೆ ಹಾಗೂ ಫಾತಿಮತ್ ನಿಶಾನ ಅವರ ಪತಿ ಅನ್ಸಾರ್ ಅವರಿಂದ ಮಾಹಿತಿ ಪಡೆದರು.
ತನ್ನ ಪುತ್ರಿಯ ಸಾವಿನ ವಿಚಾರವಾಗಿ ಶಾಸಕರ ಜೊತೆ ತನ್ನ ನೋವನ್ನು ತೋಡಿಕೊಂಡ ಜುಬೈದಾ ಅವರು ನನ್ನ ಮಗಳನ್ನು ಅನ್ಯಾಯವಾಗಿ ಕೊಲೆ ಮಾಡಲಾಗಿದೆ, ಆರೋಪಿಗಳ ಬಂಧನ ಆಗಿದ್ದರೂ ತನಿಖೆ ನಿಧಾನಗತಿಯಲ್ಲಿ ಆಗುತ್ತಿದೆ, ಮಗಳ ಮಾವ, ಅತ್ತೆ ಹಾಗೂ ನಾದಿನಿ ನನ್ನ ಮಗಳ ಸಾವಿಗೆ ಕಾರಣರಾಗಿದ್ದು ಅವರ ವಿರುದ್ದ ಕಠಿಣ ಕಾನೂನು ಕ್ರಮ ಆಗಬೇಕು ಎಂದು ಹೇಳಿದರು. ಮಗಳನ್ನು ಕಳೆದುಕೊಂಡ ನೋವು ನಮಗೆ ಮರೆಯಲು ಸಾಧ್ಯವಿಲ್ಲ, ಕೊಲೆ ಮಾಡಿದವರು ನಾಳೆ ಜೈಲಿನಿಂದ ಹೊರಬಂದು ರಾಜಾರೋಷವಾಗಿ ಇರುತ್ತಾರೆ, ಹಾಗಾದ್ರೆ ನಮಗೆ ನ್ಯಾಯ ಸಿಗುವುದು ಹೇಗೆ ಎಂದು ಅವರು ಕೇಳಿದರು.

ನಿಷ್ಪಕ್ಷಪಾತ ತನಿಖೆ ಆಗಬೇಕು-ಅಶ್ರಫ್ ಸಾರೆಪುಣಿ
ಸಾರೆಪುಣಿ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಸಾರೆಪುಣಿ ಮಾತನಾಡಿ ಫಾತಿಮತ್ ನಿಶಾನ ಮೃತಪಟ್ಟ ವಿಚಾರದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ಆಗುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಮತ್ತು ಕುಟುಂಬಕ್ಕೆ ಸೂಕ್ತ ಪರಿಹಾರ ಮೊತ್ತ ಕೂಡಾ ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ನಿಮ್ಮ ನೋವು ನನಗೆ ತಿಳಿದಿದೆ, ನಿಮ್ಮ ಜೊತೆ ನಾನಿದ್ದೇನೆ ಎಂದು ಶಾಸಕರು ಹೇಳಿದರು.
ಬಹಳ ನೋವು ತಂದಿದೆ-ಅಶೋಕ್ ರೈ
ಶಾಸಕ ಅಶೋಕ್ ರೈ ಮಾತನಾಡಿ ಸಾರೆಪುಣಿಯ ಫಾತಿಮತ್ ನಿಶಾನ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ವಿಚಾರ ನಮಗೆಲ್ಲಾ ಬಹಳ ನೋವು ತಂದಿದೆ. ಈಗಾಗಲೇ ಈ ವಿಚಾರವಾಗಿ ಮೂವರನ್ನು ಪೊಲೀಸರು ಬಂಧಿಸಿದ್ದು ವರದಿ ಬಂದ ಬಳಿಕ ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಆಗಲಿದ್ದು ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಆಗಲಿದೆ ಎಂದು ಹೇಳಿದರು. ಕೊಲೆ ಕೃತ್ಯ ಎಸಗುವವರಿಗೆ ದೇಶದಲ್ಲಿ ಯಾವುದೇ ಕಠಿಣ ಕಾನೂನು ಇಲ್ಲ ಎನ್ನುವ ಬಗ್ಗೆ ಮೃತ ಮಹಿಳೆಯ ತಾಯಿ ಹೇಳಿದ್ದಾರೆ, ಅದು ನಿಜ ಕೂಡಾ, ನಮ್ಮ ದೇಶದಲ್ಲಿ ಕೊಲೆ ಮಾಡಿದವರಿಗೆ ಸರಿಯಾದ ಶಿಕ್ಷೆ ವಿಧಿಸುವ ಕಾನೂನು ಇಲ್ಲ, ಮೊನ್ನೆ ಒಬ್ಬ ಬಿ.ಸಿ ರೋಡಲ್ಲಿ ಲೈವ್ ಆಗಿ ಹುಡುಗಿಯೊಬ್ಬಳನ್ನು ಕೊಲೆ ಮಾಡಿದ್ದಾನೆ, ಇದೀಗ ಈ ಮಹಿಳೆಯ ಅನುಮಾನಾಸ್ಪದ ಸಾವು ಸಂಭವಿಸಿದೆ, ಸೌದಿ ಅರೇಬಿಯಾ ಮಾದರಿಯ ಕಾನೂನು ಜಾರಿಯಾದರೆ ಇಲ್ಲಿ ಕೂಡಾ ಕೊಲೆ ಕೃತ್ಯ ಕಡಿಮೆಯಾಗಬಹುದು ಎಂದು ಅವರು ಹೇಳಿದರು.
ಫಾತಿಮತ್ ನಿಶಾನ ಸಂಶಯಾಸ್ಪದ ಸಾವಿನ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಮಾತನಾಡಿ ಮನೆಯವರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಸರಕಾರದ ಮಟ್ಟದಲ್ಲಿ ಯಾವ ರೀತಿ ಪರಿಹಾರ ಮೊತ್ತ ವ್ಯವಸ್ಥೆ ಮಾಡಬಹುದು ಎಂದು ಚರ್ಚಿಸಿ ಅದರ ಬಗ್ಗೆ ಪ್ರಯತ್ನ ಮಾಡುತ್ತೇನೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಖಾದರ್ ಮೇರ್ಲ, ಸಲಾಂ ಸಂಪ್ಯ, ಸಿದ್ದೀಕ್ ಸುಲ್ತಾನ್, ಪ್ರವೀಣ್ ಆಚಾರ್ಯ ನರಿಮೊಗರು, ಮಹಮ್ಮದ್ ಆಲಿ ನೇರೋಳ್ತಡ್ಕ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಬೂತ್ ಅಧ್ಯಕ್ಷ ಹೈದರ್, ಹಬೀಬ್ ಕಣ್ಣೂರು, ಸೋಮಯ್ಯ ತಿಂಗಳಾಡಿ, ಇಕ್ಬಾಲ್ ಸಾರೆಪುಣಿ, ಹಾರಿಸ್ ಬೋಳೋಡಿ, ಶಾಕಿರ್ ಸಾರೆಪುಣಿ, ಎಂ.ಎಂ ಸರ್ಫುದ್ದೀನ್ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.




