ಕರಾವಳಿಕ್ರೈಂ

ರೂ.6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: 24 ಗಂಟೆಯೊಳಗೆ ಆರೋಪಿ ಬಂಧನ



ಮಂಗಳೂರು: ಮನೆ ಕಾಮಗಾರಿ ನಡೆಸುವ ವೇಳೆ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿ, ಕಳವಾದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಪ್ರದೇಶದ ಮನೆಯೊಂದರಲ್ಲಿ ಹಿಂಭಾಗದ ಕೊಠಡಿಯ ಛಾವಣಿ ಬದಲಾವಣೆ ಹಾಗೂ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾಯರ್‌ನಲ್ಲಿದ್ದ ಪರ್ಸ್‌ನೊಳಗೆ ಇರಿಸಲಾಗಿದ್ದ 20 ಗ್ರಾಂ ತೂಕದ ಚಿನ್ನದ ಕಡಗ, 17 ಗ್ರಾಂ ತೂಕದ ಚಿನ್ನದ ಚೈನ್, 8 ಗ್ರಾಂ ಹಾಗೂ 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಮತ್ತು ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್ ಸೇರಿದಂತೆ ಒಟ್ಟು ₹6.37 ಲಕ್ಷ ಮೌಲ್ಯದ ಆಭರಣಗಳು ಕಳುವಾಗಿದ್ದವು.

 



ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/2026ರಡಿ ಬಿಎನ್‌ಎಸ್ ಕಲಂ 305 ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಿದ ವೇಳೆ, ಉತ್ತರ ಪ್ರದೇಶ ಮೂಲದ ಜಹೀರುದ್ದೀನ್ (24) ಕಳವು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯು ಪ್ರಸ್ತುತ ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ವಾಸವಾಗಿದ್ದ.
ಆರೋಪಿಯಿಂದ ಕಳವಾಗಿದ್ದ ಎಲ್ಲಾ ಚಿನ್ನಾಭರಣಗಳು ಹಾಗೂ ವಾಚ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸುವಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಆರ್. ಮಂಜಪ್ಪ, ಪಿಎಸ್‌ಐ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿಯ ತಂಡ ಪ್ರಮುಖ ಪಾತ್ರವಹಿಸಿದ್ದು, ಪ್ರಕರಣವನ್ನು ಕೇವಲ 24 ಗಂಟೆಗಳೊಳಗೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

Leave a Reply

Your email address will not be published. Required fields are marked *

error: Content is protected !!