ಕರಾವಳಿಕ್ರೈಂ

ಪುತ್ತೂರು: ಸಾರೆಪುಣಿಯ ಮಹಿಳೆ ಸಂಪಾಜೆ ಪತಿಯ ಮನೆಯಲ್ಲಿ ಅನುಮಾನಾಸ್ಪದ ಸಾವು

ಪುತ್ತೂರು: ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲದಲ್ಲಿ ವಿವಾಹಿತ ಮಹಿಳೆಯೋರ್ವರು ಜು.18ರಂದು ರಾತ್ರಿ ಮೃತಪಟ್ಟ ಘಟನೆ ನಡೆದಿದ್ದು ಸಾವಿನ ಬಗ್ಗೆ ಮಹಿಳೆಯ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಿದ ಘಟನೆ ನಡೆದಿದೆ. ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22ವ) ಮೃತಪಟ್ಟ ಮಹಿಳೆ.

ಮೃತದೇಹವನ್ನು ಪ್ರಥಮವಾಗಿ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಫಾತಿಮತ್ ನಿಶಾನ ಪುತ್ತೂರು ತಾಲೂಕು ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿಯಾಗಿದ್ದು ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಫಾತಿಮತ್ ನಿಶಾನ ಗಂಡನ ಕುಟುಂಬವು ಮೊದಲು ದೇವರಕೊಲ್ಲಿಯಲ್ಲಿ ವಾಸಿಸುತ್ತಿದ್ದು ಇದೀಗ ಕೆಲವು ವರ್ಷಗಳಿಂದ ಸಂಪಾಜೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.


ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಾಯಿಗೆ ಕರೆ ಮಾಡಿದ್ದ ನಿಶಾನ!!
ಜು.18ರಂದು ರಾತ್ರಿ ಫಾತಿಮತ್ ನಿಶಾನ ತನ್ನ ತಾಯಿಗೆ ಕರೆ ಮಾಡಿ ತನಗೆ ತನಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ಕೂಡಲೇ ತಾಯಿ ಜುಬೈದಾ ಅವರು ಕುಂಬ್ರದ ರಿಕ್ಷಾವೊಂದರಲ್ಲಿ ಮಗಳ ಮನೆಗೆ ತೆರಳಿದ್ದರು. ಜುಬೈದಾ ಮಗಳ ಮನೆಗೆ ತಲುಪಿದಾಗ ಮಗಳು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಫಾತಿಮತ್ ನಿಶಾನ ಅವರು ಸ್ನಾನಗೃಹದ ಶವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿದ್ದಾರೆ. ಆದರೆ ಅದನ್ನು ಮೃತ ಮಹಿಳೆಯ ಕುಟುಂಬಸ್ಥರು ನಿರಾಕರಿಸಿದ್ದು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಮೃತ ಫಾತಿಮತ್ ನಿಶಾನ ಅವರು ತಾಯಿ, ಪತಿ, ಎರಡೂವರೆ ವರ್ಷದ ಪುತ್ರ ಹಾಗೂ ಸಹೋದರರಾದ ನಿಝಾಮ್ ಹಾಗೂ ನವಾಝ್ ಅವರನ್ನು ಅಗಲಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!