ಕರಾವಳಿಕ್ರೈಂ

ಉಪ್ಪಿನಂಗಡಿ: ಖೋಟಾ ನೋಟು ಮುದ್ರಣ ಜಾಲ ಪತ್ತೆ ಹಚ್ಚಿದ  ಪೊಲೀಸರು-7 ಆರೋಪಿಗಳ ಬಂಧನ



ಉಪ್ಪಿನಂಗಡಿ: ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭಾರತೀಯ ಖೋಟಾ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಗುರುವಾರ ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿ  ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ ವೇಳೆ ಆರೋಪಿಗಳಾದ

1) ಇಬ್ರಾಹಿಂ (60) ಪುತ್ತೂರು ಕಸಬ ಗ್ರಾಮ, ದ ಕ ಜಿಲ್ಲೆ. 

2) ಶರೀಪ (51) ಚಂಗುಲ ಗ್ರಾಮ, ಕಾಸರಗೋಡುಜಿಲ್ಲೆ.

3) ಸಂದೀಪ ಪುಂಡಲಿಕ ಶೋಳಂಬಿ (30), ಹಳಿಯಾಳ ತಾಲೂಕು ಉತ್ತರ ಕನ್ನನಡ ಜಿಲ್ಲೆ.

4) ಮಹಮ್ಮದ್ ನಬಾಸ್ (37), ಆಮೂರು ಗ್ರಾಮ, ಕಾಸರಗೊಡು ಜಿಲ್ಲೆ.

5)  ಸಲ್ಮಾನ್ ಫಾರೀಸ್ (25) ಒಳಮೊಗ್ರು ಗ್ರಾಮ, ಪುತ್ತೂರು

6) ಸಿರಾಜುದ್ದೀನ್ (34), ಉರುವಾಲು ಗ್ರಾಮ, ಬೆಳ್ತಂಗಡಿ

7) ಇರ್ಷಾದ್ (31) ಪುತ್ತಿಲ ಗ್ರಾಮ, ಬೆಳ್ತಂಗಡಿ ಮೊದಲಾದವರನ್ನು ವಶಕ್ಕೆ ಪಡೆಯಲಾಗಿದೆ.

 


ದಾಳಿ ವೇಳೆ ₹500 ಮುಖಬೆಲೆಯ ಒಂದು ನೋಟು, ₹500 ಮುಖಬೆಲೆಯ ನೋಟುಗಳಂತೆ ಕಾಣುವ ಎ-4 ಗಾತ್ರದ 21 ಹಾಳೆಗಳು, ಕಂಪ್ಯೂಟರ್, ಝೆರಾಕ್ಸ್ ಯಂತ್ರ, ವಿವಿಧ ಸೀಲುಗಳು ಸೇರಿದಂತೆ ಖೋಟಾ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಹಲವು ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 103/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 178 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣದ ಪತ್ತೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪೊಲೀಸರಾದ ಯೋಗೀಶ್ ಬಿ. ಹಾಗೂ ನಿರಂಜನ್ ಎಂ.ಎನ್. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್, ಎಎಸ್‌ಐ ದೀಪಕ್, ಹೆಡ್ ಕಾನ್ಸ್‌ಟೇಬಲ್ ಸತೀಶ್ ಹಾಗೂ ರೌಫ್ ಅವರು ಉಪ್ಪಿನಂಗಡಿ ಪೊಲೀಸರಿಗೆ ಸಹಕಾರ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!