ಕರಾವಳಿಕ್ರೈಂ

ಪುತ್ತೂರು: 41 ಬಾರಿ ವಾರೆಂಟ್ ಜಾರಿಯಾಗಿದ್ದ ಆರೋಪಿ ಕೊನೆಗೂ  ಪೊಲೀಸರ ವಶಕ್ಕೆ!


ಪುತ್ತೂರು: ಕಳೆದ 9 ವರ್ಷಗಳ ಹಿಂದೆ ನಡೆದಿದ್ದ ಸುಲಿಗೆ ಪ್ರಕರಣವೊಂದರ ಪ್ರಮುಖ ಆರೋಪಿ, ಸುಮಾರು 41 ಬಾರಿ ನ್ಯಾಯಾಲಯದ ದಸ್ತಗಿರಿ ವಾರೆಂಟ್‌ಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ನೆಲ್ಸನ್ ಸಿ.ವಿ (38) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಜುಲೈ 8ರಂದು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 


ಪ್ರಕರಣದ ಹಿನ್ನೆಲೆ:
2017ರ ಡಿಸೆಂಬರ್ 22ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತರು, ಮನೆಯವರಿಗೆ ಪಿಸ್ತೂಲ್ ಹಾಗೂ ಚೂರಿ ತೋರಿಸಿ ಬೆದರಿಸಿ ₹2,88,000 ಮೌಲ್ಯದ ಚಿನ್ನಾಭರಣ ಹಾಗೂ ₹6,00,000 ನಗದನ್ನು ದೋಚಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯಾಗಿದ್ದ ಕೇರಳ ತ್ರಿಶೂರ್ ನಿವಾಸಿ ನೆಲ್ಸನ್, ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದನು. ಆದರೆ, 2021ರ ಆಗಸ್ಟ್ 27 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ನಿಯಮಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗಾಗಿ ನ್ಯಾಯಾಲಯದಿಂದ ಬರೋಬ್ಬರಿ 41 ಬಾರಿ ದಸ್ತಗಿರಿ ವಾರೆಂಟ್ ಆದೇಶವಾಗಿತ್ತು.


ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದ ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಎ (ಎಚ್‌ಸಿ 413), ಕಾನ್‌ಸ್ಟೆಬಲ್‌ಗಳಾದ ವಿನಾಯಕ (ಪಿಸಿ 2347) ಮತ್ತು ಶಿವರಾಜ್ (ಪಿಸಿ 454) ಅವರನ್ನೊಳಗೊಂಡ ತಂಡವು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಮಿಯೂರು ಎಂಬಲ್ಲಿ ಜುಲೈ 8ರಂದು ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯದ ಷರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇದೀಗ ಮತ್ತೊಂದು ಹೊಸ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!