ಪುತ್ತೂರು: ಅಕ್ರಮ ಗೋಸಾಗಾಟ ಪತ್ತೆ; ಇಬ್ಬರ ಬಂಧನ, ಪಿಕ್‌ಅಪ್ ಹಾಗೂ ಜಾನುವಾರು ವಶ
ಪುತ್ತೂರು: ಯಾವುದೇ ದಾಖಲೆಗಳಿಲ್ಲದೆ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಜಾನುವಾರನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಜೂನ್ 25ರಂದು ಸಂಜೆ ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ನಡೆದಿದೆ.

ವಾಹನದ ಚಾಲಕ ನಾರಾಯಣ ಮತ್ತು ಸಹಪ್ರಯಾಣಿಕ ಮೊಯ್ದುಕುಂಞ ಬಂಧಿತ ಆರೋಪಿಗಳಾಗಿದ್ದಾರೆ.
ಅಕ್ರಮವಾಗಿ ಗೋಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸುಷ್ಮಾ ಜಿ. ಭಂಡಾರಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಆ ಮಾರ್ಗವಾಗಿ ಬಂದ ಪಿಕ್ ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಒಂದು ಜಾನುವಾರನ್ನು ಅತ್ಯಂತ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ದಾಖಲೆಗಳಿಲ್ಲದ ಸಾಗಾಟ:
ಪೊಲೀಸರು ವಾಹನದಲ್ಲಿದ್ದ ನಾರಾಯಣ ಹಾಗೂ ಮೊಯ್ದುಕುಂಞ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಪೂರ್ವಾನುಮತಿ ಅಥವಾ ಅಗತ್ಯ ಕಾನೂನು ದಾಖಲಾತಿಗಳು ಅವರ ಬಳಿ ಇರಲಿಲ್ಲ ಎಂಬುದು ದೃಢಪಟ್ಟಿದೆ.
ಪ್ರಕರಣ ದಾಖಲು:
ಕಾರ್ಯಾಚರಣೆ ವೇಳೆ ಪೊಲೀಸರು ಒಂದು ಜಾನುವಾರು ಹಾಗೂ ಸಾಗಾಟಕ್ಕೆ ಬಳಸಿದ ಪಿಕ್‌ಅಪ್ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 95-2026 ರಂತೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 (ಕಲಂ: 5, 7, 12) ಹಾಗೂ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 (ಕಲಂ: 11(ಡಿ)) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





