ಬೆಳ್ತಂಗಡಿ: ನದಿಯಲ್ಲಿ ಮುಳುಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
ಬೆಳ್ತಂಗಡಿ: ನೇತ್ರಾವತಿ ನದಿಗೆ ಇಳಿದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಲ್ಕಂಜ ಗ್ರಾಮದ ಪಜಿರಡ್ಕ ದೇವಸ್ಥಾನದ ಬಳಿ ಮೇ.19ರಂದು ಸಂಜೆ ನಡೆದಿದೆ.

ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ
ಗೋಕಾಕ್ ಮೂಲದ ಶ್ರೀಪೂರ್ಣ (22) ಮೃತಪಟ್ಟವರು.
ಶ್ರೀಪೂರ್ಣ ಸೇರಿದಂತೆ ಉಜಿರೆಯ ಇಂಜಿನಿಯರಿಂಗ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಲ್ಲಗುಂಡಿ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು.
ಈ ವೇಳೆ ಶ್ರೀಪೂರ್ಣ ನದಿಯ ಹೊಂಡದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಅಗ್ನಿಶಾಮಕ ದಳ, ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಸುಮಾರು ನಾಲ್ಕು ಗಂಟೆಗಿಂತ ಅಧಿಕ ಸಮಯ ನದಿಯಲ್ಲಿ ಹುಡುಕಾಟ ನಡೆಸಿದ್ದು ರಾತ್ರಿ ವೇಳೆಗೆ ಶ್ರೀಪೂರ್ಣರ ಮೃತದೇಹ ಪತ್ತೆಯಾಗಿದೆಯೆನ್ನಲಾಗಿದೆ.
ಇತ್ತೀಚೆಗೆ ಮಳೆಯಾಗುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಅಧಿಕವಾಗಿದ್ದು, ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




