ಎನ್ಒಸಿ ನೀಡಲು ಲಂಚದ ಬೇಡಿಕೆ: ತಾಲೂಕು ಕಚೇರಿ ಭೂ ಸುಧಾರಣಾ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ
ಪ್ರತ್ತೂರು: ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಲಂಚದ ಹಣದ ಸಮೇತ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್ ಡಿಎ ಸಿಬ್ಬಂದಿಯನ್ನು ಗುರುವಾರ ಸಂಜೆ ಬಂಧಿಸಿದ್ದಾರೆ. ಪುತ್ತೂರು ತಹಶೀಲ್ದಾರ್ ಸದ್ಯಕ್ಕೆ ನಾಪತ್ತೆಯಾಗಿದ್ದಾರೆ.

ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್‌ಡಿಎ ಸುನೀಲ್ ಎಂಬವರು ದೂರುದಾರರಿಂದ ರೂ.12,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಪುತ್ತೂರು ತಹಶೀಲ್ದಾರ್ ಕುಡಲಗಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ದೂರುದಾರರ ಚಿಕ್ಕಪ್ಪಗೆ ಸೇರಿದ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ಮಂಜೂರಾಗಿದ್ದು ನಂತರ ಅವರು ವೀಲುನಾಮೆ ಮೂಲಕ ದೂರುದಾರರಿಗೆ ಹಕ್ಕು ಬರೆಸಿಕೊಟ್ಟಿದ್ದರು. ಜಾಗವನ್ನು ಪರಭಾರೆ ಮಾಡಲು ತಹಶೀಲ್ದಾರ್ ನಿರಾಕ್ಷೇಪಣಾ ಪತ್ರ ಅವಶ್ಯಕವಾಗಿ ದ್ದರಿಂದ, 2024ರ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಬಾಕಿ ಇರುವುದರಿಂದ ವಿಚಾರಿಸಿದಾಗ, ಕೇಸ್ ವರ್ಕರ್ (ಎಫ್ ಡಿಎ) ಸುನೀಲ್ ತಹಶೀಲ್ದಾರರ ಸಹಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ದೂರುದಾರ ಮಂಗಳೂರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಕಾರ್ಯಾಚರಣೆಯ ತಂಡದಲ್ಲಿ ಲೋಕಾಯುಕ್ತ ಎಸ್ಪಿ (ಪ್ರಭಾರ) ಕುಮಾರ್ ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್, ಇನ್‌ಸ್ಪೆಕ್ಟರ್‌ಗಳು ಭಾರತಿ, ಚಂದ್ರಶೇಖರ್ ಕೆ.ಎನ್., ರವಿ ಪವರ್ ಹಾಗೂ ಸಿಬ್ಬಂದಿ ಮಹೇಶ್, ರಾಜಪ್ಪ ರಾಧಾಕೃಷ್ಣ ಆದರ್ಶ, ವಿವೇಕ್, ವಿನಾಯಕ, ಪ್ರವೀಣ್, ಗಂಗಣ್ಣ ನಾಗಪ್ಪ ಮಾಹದೇವ, ಪವಿತ್ರ, ದುಂಡಪ್ಪ ರುದ್ರಗೌಡ, ರಾಜಶೇಖರ್ ಪಾಲ್ಗೊಂಡಿದ್ದರು.





