ಪುತ್ತೂರು ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದಲೇ ಸೈನ್ಸ್ ಸೆಕ್ಷನ್ ಆರಂಭ
ಪುತ್ತೂರು: ಪುತ್ತೂರಿನ ಬೊಳುವಾರಿನಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ವರ್ಷದಿಂದಲೇ ಸೈನ್ಸ್ (ಪದವಿ ವಿಜ್ಞಾನ) ವಿಭಾಗ ಪ್ರಾರಂಭವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗವಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಹೊಸ ಕಾಲೇಜು ಕಟ್ಟಡ ನಿರ್ಮಾಣವಾಗಿದ್ದು ಕೊಠಡಿ ಕೊರತೆಯನ್ನು ನೀಗಿಸಲಾಗಿದೆ. ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ವಿಭಾಗವನ್ನು ಪ್ರಾರಂಭ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ವರ್ಷದಿಂದಲೇ ವಿಜ್ಞಾನ ವಿಭಾಗ ಪ್ರಾರಂಭಕ್ಕೆ ಸೂಚನೆಯನ್ನು ನೀಡಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ.
ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಪೀಠೋಪಕರಣಕ್ಕೆ ಒಂದು ಕೋಟಿ ಅನುದಾನ ನೀಡುವಂತೆಯೂ ಈ ಸಂದರ್ಭದಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದರು. ವಿಜ್ಷಾನ ವಿಭಾಗ ಪ್ರಾರಂಭಗೊಂಡಲ್ಲಿ ಪ್ರಯೋಗಾಲಯದ ಅಗತ್ಯವಿದ್ದು ಅದಕ್ಕೆ ಬೇಕಾದ ಅಗತ್ಯ ಪರಿಕರಗಳನ್ನು ಒದಗಿಸುವಂತೆ ಶಾಸಕರು ಮನವಿ ಮಾಡಿದ್ದು ಸಚಿವರು ಅನುದಾನದ ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.




