ಚಾರಣಕ್ಕೆ ತೆರಳಿದ್ದ ಯುವಕ ಮೃತ್ಯು
ಪುತ್ತೂರು: ಚಾರಣಕ್ಕೆ ತೆರಳಿದ್ದ ಯುವಕನೋರ್ವ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮೂಡುಬಿದಿರೆ ತಾಲೂಕಿನ ಪಡು ಕೊಣಾಜೆ ಗ್ರಾಮದ ಕೊಣಾಜೆ ಕಲ್ಲು ಎಂಬಲ್ಲಿಗೆ ಚಾರಣಕ್ಕೆ ತೆರಳಿದ್ದ ಯುವಕ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ನಿವಾಸಿ ಮನೋಜ್ ಎನ್. (25) ಮೃತಪಟ್ಟವರು.

ಇವರು ಮಂಗಳೂರಿನಲ್ಲಿ ರಾವ್ ಆಂಡ್ ರಾವ್ ಚಾರ್ಟೆಡ್ ಅಕೌಟೆಂಟ್ ಕಂಪೆನಿ ಉದ್ಯೋಗಿಯಾಗಿದ್ದರು. ಮನೋಜ್ ತನ್ನ ಸ್ನೇಹಿತನಾದ ಕಾರ್ತಿಕ್ ಎಂಬವರೊಂದಿಗೆ ಬುಧವಾರ ಬೆಳಗ್ಗೆ 6:20ರ ಸುಮಾರಿಗೆ ಕೊಣಾಜೆ ಕಲ್ಲು ಎಂಬಲ್ಲಿಗೆ ಚಾರಣಕ್ಕೆ ತೆರಳಿದ್ದರು. 8:30ರ ಸುಮಾರಿಗೆ ಕೊಣಾಜೆ ಕಲ್ಲಿನ ತುದಿಗೆ ತಲುಪಿದ್ದಂತೆ ಮನೋಜ್ ಸುಸ್ತಾಗಿ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಕಾರ್ತಿಕ್ ಕೂಡಲೇ ಮನೋಜ್‌ರನ್ನು ಸಾರ್ವಜನಿಕರ ಸಹಾಯದೊಂದಿಗೆ 108 ಆಂಬುಲೆನ್ಸ್‌ನಲ್ಲಿ ಚಿಕಿತ್ಸೆಗಾಗಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮನೋಜ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.