ವಿಟ್ಲ: ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ
ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಾ, ಮನೆಯ ಸಮೀಪ ತಲುಪುತ್ತಿದ್ದಂತೆ, ವ್ಯಕ್ತಿಯೊಬ್ಬ ಕತ್ತಿಯಿಂದ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ಆರೋಪಿ ಅಶ್ರಫ್ ಎಂಬಾತನು ಕತ್ತಿಯನ್ನು ಹಿಡಿದುಕೊಂಡು ಬಂದು ಸ್ಕೂಟರಿನಲ್ಲಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಕತ್ತಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆಯ ಬೆರಳುಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ವೇಳೆ ಬೊಬ್ಬೆ ಕೇಳಿ ಮಹಿಳೆಯ ತಾಯಿ ಹಾಗೂ ನೆರೆಕೆರೆಯವರು ಓಡಿ ಬರುತ್ತಿರುವುದನ್ನು ಕಂಡು ಆರೋಪಿಯು ಜೀವ ಬೆದರಿಕೆ ಹಾಕಿ ತೆರಳಿರುತ್ತಾನೆ.
ಹಲ್ಲೆಯಿಂದಾದ ಗಾಯಗಳಿಗೆ ಮಹಿಳೆಯು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಶ್ರಫ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.